ತೆಲಂಗಾಣದಲ್ಲಿ ಯಶ ನೀಡಿದ ಕಾಂಗ್ರೆಸ್‍ನ ’ಕರ್ನಾಟಕ ಯೋಜನೆ’

Update: 2023-12-04 02:18 GMT

Photo: AP

ಬೆಂಗಳೂರು: ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ ಪಕ್ಷವನ್ನು ಸದೆಬಡಿದು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ, ಪಂಚ ಭರವಸೆಗಳ ತಂತ್ರ ಅನುಸರಿಸುವ ಪಕ್ಷದ ಕರ್ನಾಟಕ ರಾಜ್ಯ ಘಟಕ ’ಲಿಟ್ಮಸ್ ಪರೀಕ್ಷೆ’ ಯಲ್ಲಿ ಯಶ ಸಾಧಿಸಿದಂತಾಗಿದೆ. ಕರ್ನಾಟಕ ಮುಖಂಡರು ಪಕ್ಕದ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಕಷ್ಟು ಪ್ರಯತ್ನ ಹಾಕಿದ್ದರು.

ಕರ್ನಾಟಕದಲ್ಲಿ ಪಕ್ಷ ಜಾರಿಗೆ ತಂದಿರುವ ನೀತಿಗಳ ಬಗ್ಗೆ ಪಕ್ಕದ ರಾಜ್ಯದ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿರುವುದು ತೆಲಂಗಾಣದ ಯಶಸ್ಸಿಗೆ ಪ್ರಮುಖ ಕಾರಣ ಎನ್ನುವುದು ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಲುವು.

ಕರ್ನಾಟಕದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಸರ್ಕಾರ, ತಾನು ಭರವಸೆ ನೀಡಿದ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಿತು. ಇದರಲ್ಲಿ ವಿದ್ಯುತ್ ಸಬ್ಸಿಡಿ, ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ 2000 ರೂಪಾಯಿ ನೆರವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಗಳು ಸೇರಿವೆ. ಇದೇ ರೀತಿ ತೆಲಂಗಾಣ ಕಾಂಗ್ರೆಸ್ ಕೂಡಾ ಭರವಸೆಗಳನ್ನು ನೀಡಿ, ಬಿಆರ್ಎಸ್ ಯೋಜನೆಗಳನ್ನು ಸಮರ್ಥವಾಗಿ ಎದುರಿಸಿತು.

ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ಎಂ.ಸಿ.ಸುಧಾಕರ್, ಶರಣ ಪ್ರಕಾಶ್ ಪಾಟೀಲ್ ಮತ್ತು ಬಿ.ನಾಗೇಂದ್ರ ಸೇರಿದಂತೆ ಹಲವು ಮುಖಂಡರು ತೆಲಂಗಾಣದಲ್ಲಿ ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಚುನಾವಣಾ ಆಶ್ವಾಸನೆಗಳನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂಬ ಅಂಶವನ್ನು ಈ ಮುಖಂಡರು ಪ್ರಮುಖವಾಗಿ ಬಿಂಬಿಸಿದ್ದರು.

ಈ ಯೋಜನೆಗಳು ಕರ್ನಾಟಕದಲ್ಲಿ ವಿಫಲವಾಗಿವೆ ಎಂಬ ಬಿಆರ್ಎಸ್ನ ಆರೋಪದ ನಡುವೆಯೂ ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕಾಂಗ್ರೆಸ್ ಕಾರ್ಯತಂತ್ರವನ್ನು ವಿಫಲಗೊಳಿಸುವ ಉದ್ದೇಶದಿಂದ ಬಿಆರ್ಎಸ್, ಕನ್ನಡಿಗ ರೈತರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಚುನಾವಣಾ ಪೂರ್ವದಲ್ಲಿ ಕರ್ನಾಟಕಕ್ಕೆ ನಿಯೋಗವನ್ನು ಕಳುಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News