2024ರ ಲೋಕಸಭಾ ಚುನಾವಣೆಗೆ ಸಮಾನ ನಾಗರಿಕ ಸಂಹಿತೆಯ ದಾಳ ಉರುಳಿಸಿದ ಬಿಜೆಪಿ; ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಕಾಂಗ್ರೆಸ್

Update: 2023-07-02 08:36 GMT
ಫೈಲ್ ಚಿತ್ರ- PTI

ಹೊಸದಿಲ್ಲಿ: ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಸ್ಥಾಯಿ ಸಮಿತಿ ಸದಸ್ಯರು ವೈಯಕ್ತಿಕ ಕಾನೂನಿನ ಪರಾಮರ್ಶೆಗಾಗಿ ಜುಲೈ 3ರಂದು ಸಭೆ ಸೇರುತ್ತಿದ್ದು, ಅದಕ್ಕೆ ಈಗಷ್ಟೇ ಸಲ್ಲಿಸಲಾಗಿರುವ 'ಕೌಟುಂಬಿಕ ಕಾನೂನು ಸುಧಾರಣೆ' ಕುರಿತ 21ನೇ ಕಾನೂನು ಆಯೋಗದ ಸಮಾಲೋಚನಾ ಪತ್ರದಲ್ಲಿ, "ಸಮಾನ ನಾಗರಿಕ ಸಂಹಿತೆಯನ್ನು ರೂಪಿಸುವ ಅಗತ್ಯವಿಲ್ಲ ಅಥವಾ ಈ ಹಂತದಲ್ಲಿ ಅದು ಅಪೇಕ್ಷಣೀಯವೂ ಅಲ್ಲ" ಎಂದು ತಿಳಿಸಲಾಗಿದೆ ಎಂದು ರವಿವಾರ ಕಾಂಗ್ರೆಸ್ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ಹಾಲಿ 22ನೇ ಕಾನೂನು ಆಯೋಗವು ವೈಯಕ್ತಿಕ ಕಾನೂನು (ಸಮಾನ ನಾಗರಿಕ ಸಂಹಿತೆ) ಕುರಿತು ಇನ್ನಷ್ಟೆ ತನ್ನ ವರದಿ ಸಲ್ಲಿಸಬೇಕಿದ್ದು, ಈ ವಿಷಯದ ಕುರಿತು ಕಾನೂನು ಆಯೋಗ ಹಾಗೂ ಕಾನೂನು ಸಚಿವಾಲಯದ ಅಭಿಪ್ರಾಯವನ್ನು ಕಾದು ನೋಡಲಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.

ಸಮಿತಿಯ ಸದಸ್ಯರಿಗೆ ಸಮಾನ ನಾಗರಿಕ ಸಂಹಿತೆ ಕುರಿತು ಕಾನೂನು ಆಯೋಗ ಅಥವಾ ಕಾನೂನು ಸಚಿವಾಲಯದ ಮತ್ಯಾವುದೇ ವರದಿಗಳನ್ನು ಒದಗಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

'ವೈಯಕ್ತಿಕ ಕಾನೂನು ಪರಾಮರ್ಶೆ' ಕುರಿತು ಅಭಿಪ್ರಾಯಗಳನ್ನು ಪಡೆಯಲು ಕಾನೂನು ವ್ಯವಹಾರಗಳ ಇಲಾಖೆ, ಶಾಸಕಾಂಗ ಇಲಾಖೆ ಹಾಗೂ ಕಾನೂನು ಆಯೋಗದ ಸದಸ್ಯರನ್ನು ಸಮಿತಿಯು ಆಹ್ವಾನಿಸಿದೆ.

ಸಮಾನ ನಾಗರಿಕ ಸಂಹಿತೆ ಕುರಿತು ಶನಿವಾರ ತನ್ನ ನಿಲುವಿಗೆ ಅಂಟಿಕೊಂಡಿರುವ ಕಾಂಗ್ರೆಸ್, ಅದು ಈ ಹಂತದಲ್ಲಿ ಅನಪೇಕ್ಷಿತವಾಗಿದೆ ಎಂದು ಹೇಳಿದೆ. ಇದರೊಂದಿಗೆ ಈ ವಿಷಯದ ಕುರಿತು ಕರಡು ಮಸೂದೆ ಅಥವಾ ವರದಿ ಬಂದಾಗ ಅದರ ಕುರಿತು ಪ್ರತಿಕ್ರಿಯಿಸುವುದಾಗಿ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಸಮಾನ ನಾಗರಿಕ ಸಂಹಿತೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದ ಪ್ರಧಾನಿ ನರೇಂದ್ರ ಮೋದಿ, ವೈಯಕ್ತಿಕ ಸಂಗತಿಗಳನ್ನು ನಿಭಾಯಿಸಲು ಒಂದು ದೇಶ ಹೇಗೆ ಎರಡು ಕಾನೂನುಗಳೊಂದಿಗೆ ವ್ಯವಹರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮುಸ್ಲಿಂ ಸಮುದಾಯವನ್ನು ಹಾದಿ ತಪ್ಪಿಸಲು ಹಾಗೂ ಪ್ರಚೋದಿಸಲು ಸಮಾನ ನಾಗರಿಕ ಸಂಹಿತೆಯ ವಿಷಯವನ್ನು ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News