ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳಿಗೆ ತಮ್ಮ ನಿಜವಾದ ಜನಸಂಖ್ಯೆ ಗೊತ್ತಾದಾಗ ದೇಶವು ಬದಲಾಗುತ್ತದೆ: ರಾಹುಲ್
Update: 2023-11-15 16:49 GMT
ಬೆಮೆತರಾ (ಛತ್ತೀಸ್ಗಡ),ನ.15: ಜಾತಿ ಗಣತಿಗಾಗಿ ತನ್ನ ಪಕ್ಷದ ಬೇಡಿಕೆಯನ್ನು ಬುಧವಾರ ಇಲ್ಲಿ ಪುನರುಚ್ಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಒಬಿಸಿಗಳು,ದಲಿತರು ಮತ್ತು ಆದಿವಾಸಿಗಳು ತಮ್ಮ ವಾಸ್ತವಿಕ ಜನಸಂಖ್ಯೆಯ ಬಗ್ಗೆ ತಿಳಿದುಕೊಂಡ ದಿನವೇ ದೇಶವು ಶಾಶ್ವತವಾಗಿ ಬದಲಾಗುತ್ತದೆ ಎಂದು ಹೇಳಿದರು. ನ.17ರಂದು ನಡೆಯಲಿರುವ ಎರಡನೇ ಹಂತದ ಛತ್ತೀಸ್ಗಡ ವಿಧಾನಸಭಾ ಚುನಾವಣೆಗೆ ಪ್ರಚಾರದ ಅಂತಿಮ ದಿನ ಇಲ್ಲಿ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್,ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟ ನಿಲುವನ್ನು ತಳೆಯುತ್ತಿಲ್ಲ ಎಂದು ಆರೋಪಿಸಿದರು. ಮೋದಿಯವರು 12,000 ಕೋ.ರೂ.ಮೌಲ್ಯದ ವಿಮಾನದಲ್ಲಿ ಪ್ರಯಾಣಿಸುತ್ತಾರೆ ಮತ್ತು ಪ್ರತಿ ದಿನ ಹೊಸ ಉಡುಪನ್ನು ಧರಿಸುತ್ತಾರೆ. ಅವರು ಒಬಿಸಿ ಪದವನ್ನು ಬಳಸಿ ಮತ್ತು ಅವರ ಹಿತಾಸಕ್ತಿಯಲ್ಲಿ ಕೆಲಸ ಮಾಡುವ ಭರವಸೆಯೊಂದಿಗೆ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಒಬಿಸಿಗಳಿಗೆ ಅವರ ಹಕ್ಕುಗಳನ್ನು ನೀಡುವ ಸಮಯ ಬಂದಾಗ ಮೋದಿ,ಒಬಿಸಿ ಎನ್ನುವುದೇ ಇಲ್ಲ,ಬಡವರು ಭಾರತದಲ್ಲಿಯ ಏಕೈಕ ಜಾತಿಯಾಗಿದ್ದಾರೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್,‘ಒಬಿಸಿಗಳ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನಾವು ಕಂಡುಕೊಳ್ಳುತ್ತೇವೆ. ಮೋದಿ ಜಾತಿ ಗಣತಿಯನ್ನು ನಡೆಸಲಿ ಅಥವಾ ನಡೆಸದಿರಲಿ,ಛತ್ತೀಸ್ಗಡದಲ್ಲಿ ನಮ್ಮ ಸರಕಾರವು ಅಧಿಕಾರಕ್ಕೆ ಮರಳಿದ ದಿನವೇ ಇಲ್ಲಿ ಜಾತಿಗಣತಿಯು ಆರಂಭವಾಗಲಿದೆ. ಕೇಂದ್ರದಲ್ಲಿ ನಮ್ಮ ಸರಕಾರವು ಅಧಿಕಾರಕ್ಕೆ ಬಂದ ದಿನ ಮೊದಲ ಸಹಿಯು ದೇಶಾದ್ಯಂತ ಜಾತಿ ಗಣತಿ ಆದೇಶಕ್ಕೆ ಬೀಳಲಿದೆ. ಅದು ಐತಿಹಾಸಿಕ ನಿರ್ಧಾರವಾಗಲಿದೆ ’ ಎಂದು ಹೇಳಿದರು. ಕಾಂಗ್ರೆಸ್ ಸರಕಾರಗಳು ರೈತರ ಸಾಲಗಳನ್ನು ಮನ್ನಾ ಮಾಡಿದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅದಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳ ಸಾಲಗಳನ್ನು ಮನ್ನಾ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು.