2 ವರ್ಷಗಳ ಬಳಿಕ ಇಂಡಿಗೊಗೆ ಹೇರಿದ್ದ ಬಹಿಷ್ಕಾರವನ್ನು ಕೊನೆಗೊಳಿಸಿದ ಸಿಪಿಎಂ ನಾಯಕ; ಕಾರಣವೇನು ಗೊತ್ತೇ?

Update: 2024-09-13 12:38 GMT

ಇ.ಪಿ. ಜಯರಾಜನ್ | PC : PTI 

ಕೋಯಿಕ್ಕೋಡ್: 2022ರಲ್ಲಿ ಇನ್ನೆಂದಿಗೂ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಶಪಥ ಮಾಡಿದ್ದ LDF ಸಂಚಾಲಕ ಹಾಗೂ ಸಿಪಿಎಂ ನಾಯಕ ಇ.ಪಿ. ಜಯರಾಜನ್, ಗುರುವಾರ ರಾತ್ರಿ ಕರಿಪುರ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಇಂಡಿಗೊ ವಿಮಾನದಲ್ಲೇ ಪ್ರಯಾಣ ಬೆಳೆಸಿದರು. ಅವರ ಈ ನಿರ್ಧಾರಕ್ಕೆ ಕಾರಣವಾಗಿದ್ದು, ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ನಿಧನ.

ಜೂನ್ 13, 2022ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರೊಂದಿಗೆ ಜಯರಾಜನ್ ಕಣ್ಣೂರಿನಿಂದ ತಿರುವನಂತಪುರಂಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿದ್ದರು. ಅದಕ್ಕೆ ಪ್ರತಿಯಾಗಿ ಜಯರಾಜನ್ ಅವರು ಆ ಇಬ್ಬರು ಪ್ರತಿಭಟನಾಕಾರರನ್ನು ಹಿಂದಕ್ಕೆ ದೂಡಿದ್ದರು.

ಇದರ ಬೆನ್ನಿಗೇ ಇಂಡಿಗೊ ವಿಮಾನ ಯಾನ ಸಂಸ್ಥೆಯು ಸಿಪಿಎಂ ನಾಯಕ ಜಯರಾಜನ್ ಅವರಿಗೆ ಮೂರು ವಾರಗಳ ಪ್ರಯಾಣ ನಿಷೇಧ ಹಾಗೂ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡು ವಾರಗಳ ಕಾಲ ನಿಷೇಧ ಹೇರಿತ್ತು.

ಈ ಕ್ರಮದಿಂದ ಕುಪಿತಗೊಂಡಿದ್ದ ಜಯರಾಜನ್, ಇನ್ನು ಮುಂದೆ ನಾನಾಗಲಿ ಅಥವಾ ನನ್ನ ಕುಟುಂಬದ ಸದಸ್ಯರಾಗಲಿ ಇಂಡಿಗೊ ವಿಮಾನದಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವುದಿಲ್ಲ. ದೇಶದಲ್ಲಿ ಆ ವಿಮಾನ ಯಾನ ಸಂಸ್ಥೆಗಿಂತಲೂ ಹೆಚ್ಚು ವಿಶ್ವಾಸಾರ್ಹತೆಯುಳ್ಳ ಹಾಗೂ ಉತ್ತಮ ಸೇವಾ ಗುಣಮಟ್ಟವುಳ್ಳ ವಿಮಾನ ಯಾನ ಸಂಸ್ಥೆಗಳಿವೆ. ನಾನು ಬೇಕಿದ್ದರೆ ನನ್ನ ಗಮ್ಯವನ್ನು ನಡೆದೇ ತಲುಪುತ್ತೇನೆಯೆ ಹೊರತು, ಇಂಡಿಗೊ ವಿಮಾನದಲ್ಲಿ ಇನ್ನೆಂದಿಗೂ ಪ್ರಯಾಣ ಬೆಳೆಸುವುದಿಲ್ಲ ಎಂದು ಶಪಥ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಜಯರಾಜನ್, ತಾವು ಅಗ್ಗದ ದರದ ವಿಮಾನ ಯಾನ ಸಂಸ್ಥೆಯಾದ ಇಂಡಿಗೊದಲ್ಲಿ ಪ್ರಯಾಣಿಸಿರುವುದನ್ನು ದೃಢಪಡಿಸಿದ್ದಾರೆ. ನನಗೆ ದಿಲ್ಲಿಯನ್ನು ತ್ವರಿತವಾಗಿ ತಲುಪಿ, ಸೀತಾರಾಮ್ ಯೆಚೂರಿಗೆ ಗೌರವ ಸಮರ್ಪಿಸಬೇಕಿದ್ದುದರಿಂದ ನಾನು ಇಂಡಿಗೊ ವಿಮಾನವನ್ನು ಆಯ್ಕೆ ಮಾಡಿಕೊಂಡೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಸೀತಾರಾಮ್ ಯೆಚೂರಿ ಎಲ್ಲದಕ್ಕಿಂತ ದೊಡ್ಡವರಾಗಿದ್ದು, ನಾನು ಎರಡು ವರ್ಷಗಳ ಹಿಂದೆ ಮಾಡಿದ್ದ ಶಪಥಕ್ಕಿಂತ, ದಿಲ್ಲಿಯನ್ನು ತ್ವರಿತವಾಗಿ ತಲುಪುವುದು ಹೆಚ್ಚು ಮುಖ್ಯವಾಗಿತ್ತು ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News