ಮೈಚಾಂಗ್ ಚಂಡಮಾರುತ: ಚೆನ್ನೈನಲ್ಲಿ ಭಾರೀ ಮಳೆಗೆ 7 ಸಾವು, ವಿಮಾನ ಹಾರಾಟ ಸ್ಥಗಿತ

Update: 2023-12-04 13:22 GMT

ಚೆನ್ನೈ : ಮೈಚಾಂಗ್ ಚಂಡಮಾರುತದ ಪರಿಣಾಮ ಸೋಮವಾರ  ಚೆನ್ನೈನಲ್ಲಿ ಭಾರೀ ಮಳೆ ಸುರಿಯಿತು. ಭಾರೀ ಮಳೆ ಮತ್ತು ಬಿರುಸಿನ ಗಾಳಿಯಿಂದಾದ ಹಾನಿಗೆ ಚೆನ್ನೈನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಚಂಡಮಾರುತದಿಂದಾಗಿ ಮಳೆಯಿಂದ ರನ್ವೇ ಜಲಾವೃತಗೊಂಡಿದ್ದರಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ. ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

 ಹವಾಮಾನ ವೈಪರೀತ್ಯದಿಂದಾಗಿ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ಚೆನ್ನೈ ನಗರದ ಹಲವೆಡೆ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ,  ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿದೆ.

ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳ ಬಳಿ ನೀರು ನಿಂತಿದೆ. ಸೈಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, ನಿಲ್ದಾಣದ  ಪ್ರವೇಶ  ದ್ವಾರವನ್ನು ಮುಚ್ಚಲಾಗಿದೆ. ಬಳಿಕ ಆಲಂದೂರಿನಲ್ಲಿ ಮೆಟ್ರೊ ರೈಲು ಹತ್ತುವಂತೆ ಪ್ರಯಾಣಿಕರಿಗೆ ಸೂಚಿಸಲಾಯಿತು.

ಭಾರೀ ಮಳೆ ಮತ್ತು ಗಾಳಿಯಿಂದಾಗಿ ಚೆನ್ನೈನ ಕಾನತ್ತೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರು ಜಾರ್ಖಂಡ್ ನಿವಾಸಿಗಳು ಎಂದು ತಿಳಿದು ಬಂದಿದೆ.

ನಿರಂತರ ಮಳೆಯಿಂದ ನಗರದಾದ್ಯಂತ ಐವರು ಸಾವಿಗೀಡಾದ ಬಗ್ಗೆ ಮಾಹಿತಿ ಬಂದಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಸುಮಾರು 70 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವ ವೈದ್ಯನಾಥನ್ ಮೇಲ್ಸೇತುವೆ ಬಳಿಯ ಪ್ಲಾಟ್ಫಾರ್ಮ್ನಲ್ಲಿ ಪತ್ತೆಯಾಗಿದೆ. ಫೋರ್ಶೋರ್ ಎಸ್ಟೇಟ್ ಬಸ್ ಡಿಪೋದಲ್ಲಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಇನ್ನೊಂದು ಶವ ಪತ್ತೆಯಾಗಿದೆ.

ದಿಂಡಿಗಲ್ ಜಿಲ್ಲೆಯ ಪದ್ಮನಾಬನ್ (50) ಎಂಬವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿ ಗಣೇಶನ್ (70) ಕೂಡ ಪಾಂಡಿಯನ್ ನಗರದಲ್ಲಿರುವ ತನ್ನ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾರೆ. ಬೆಸೆಂಟ್ ನಗರದಲ್ಲಿ ಮರ ಬಿದ್ದು ಮುರುಗನ್ (35) ಮೃತಪಟ್ಟಿದ್ದಾರೆ.

ಬಂಗಾಳಕೊಲ್ಲಿಯಲ್ಲಿ 'ಮೈಚಾಂಗ್' ಚಂಡಮಾರುತವು ಸಕ್ರಿಯವಾಗಿದೆ. ಅದು ತೀವ್ರ ಚಂಡಮಾರುತವಾಗಿ ತೀವ್ರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಕೇ ತನ್ನ ಇತ್ತೀಚಿನ ಬುಲೆಟಿನ್ನಲ್ಲಿ ತಿಳಿಸಿದೆ.

"ಪಶ್ಚಿಮ ಕೇಂದ್ರ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತವು ಬೆಳಿಗ್ಗೆ 11:30 ಕ್ಕೆ ಚೆನ್ನೈನಿಂದ ಈಶಾನ್ಯಕ್ಕೆ 90 ಕಿಮೀ ಮತ್ತು ನೆಲ್ಲೂರಿನಿಂದ 140 ಕಿಮೀ ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ. ಕ್ರಮೇಣ ತೀವ್ರಗೊಳ್ಳುವ ಸಾಧ್ಯತೆಯಿದೆ, ಬಹುತೇಕ ಉತ್ತರದ ಕಡೆಗೆ ಚಲಿಸುತ್ತದೆ ಮತ್ತು ನೆಲ್ಲೂರು ನಡುವೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುತ್ತದೆ" ಎಂದು ಭಾರತೀಯ ಹವಾಮಾನ ಇಲಾಖೆ ತನ್ನ X ಪೋಸ್ಟ್ ನಲ್ಲಿ ತಿಳಿಸಿದೆ.

ತಮಿಳುನಾಡು ಸರಕಾರವು ಮುಂಜಾಗೃತ ಕ್ರಮವಾಗಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸಾರ್ವಜನಿಕ ರಜೆ ಘೋಷಿಸಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 'ಮನೆಯಿಂದಲೇ ಕೆಲಸ ಮಾಡುವಂತೆ' ಸೂಚಿಸಿದೆ. 

ವಿಮಾನ ಕಾರ್ಯಾಚರಣೆಗೆ ಅಡ್ಡಿಯಾದ ನಂತರ ಮುಂಗಡ ಬುಕಿಂಗ್ ಗಳು ರದ್ದುಗೊಂಡಿವೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮರು ಬುಕಿಂಗ್ ಗೆ ಅವಕಾಶ ನೀಡಿವೆ. "ಡಿಸೆಂಬರ್ 4 ರಿಂದ ಡಿಸೆಂಬರ್ 10 ರ ನಡುವೆ ಚೆನ್ನೈಗೆ ಮತ್ತು ಅಲ್ಲಿಂದ ಪ್ರಯಾಣಿಸಲು ಸಾಧ್ಯವಾಗದ ಎಲ್ಲಾ ಪ್ರಯಾಣಿಕರು, ಡಿಸೆಂಬರ್ 17 ರಂದು ಅಥವಾ ಅದಕ್ಕಿಂತ ಮೊದಲು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಪ್ರಯಾಣವನ್ನು ಮರುಬುಕ್ ಮಾಡಬಹುದು" ಎಂದು ಆಕಾಶ ಏರ್ ಎಕ್ಸ್ ನಲ್ಲಿ ಬರೆದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ 21 ತಂಡಗಳನ್ನು ನಿಯೋಜಿಸಿದೆ. ಎಂಟು ಹೆಚ್ಚುವರಿ ತಂಡಗಳನ್ನು ಮೈಚಾಂಗ್ನ ದೃಷ್ಟಿಯಿಂದ ಮೀಸಲಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News