ಅಯೋಧ್ಯೆಯ ಶ್ರೀರಾಮನ ವಿಗ್ರಹದ ಚಿತ್ರ ಬಳಸಿ ಬಿಜೆಪಿಯಿಂದ ಮತಯಾಚನೆ

Update: 2024-04-18 17:05 GMT

Photo: X/BJP4India.

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮುನ್ನ ಬಿಜೆಪಿ ಗುರುವಾರ ತನ್ನ ‘ಎಕ್ಸ್’ ಹ್ಯಾಂಡಲ್ ಮೂಲಕ ಧರ್ಮದ ಹೆಸರಿನಲ್ಲಿ ಮತ ನೀಡುವಂತೆ ಬಹಿರಂಗವಾಗಿ ವಿನಂತಿಸಿದೆ.

ಅದು ‘‘ಒಂದು ಮತಕ್ಕಿರುವ ಶಕ್ತಿ’’ ಎಂಬ ಶೀರ್ಷಿಕೆಯೊಂದಿಗೆ ಅಯೋಧ್ಯೆಯ ಶ್ರೀರಾಮನ ಮೂರ್ತಿಯ ಭಾವಚಿತ್ರವನ್ನು ‘ಎಕ್ಸ್’ನ ತನ್ನ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

ಮತಗಳನ್ನು ಭದ್ರಪಡಿಸಿಕೊಳ್ಳಲು ಜಾತಿ ಅಥವಾ ಕೋಮ ಭಾವನೆಗಳ ಮನವಿಯನ್ನು ಮಾದರಿ ನೀತಿ ಸಂಹಿತೆ ಸ್ಪಷ್ಟವಾಗಿ ನಿರ್ಬಂಧಿಸುತ್ತದೆ. ಭಾರತದಲ್ಲಿ ಚುನಾವಣೆಯನ್ನು ಪ್ರಜಾಪ್ರತಿನಿಧಿ ಕಾಯ್ದೆ, 1951ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಮತ ಯಾಚಿಸಲು ಧರ್ಮವನ್ನು ಬಳಸುವುದು ಈ ಕಾಯ್ದೆಯ ಸೆಕ್ಷನ್ 123 (3) ಅಡಿಯಲ್ಲಿ ‘ಭ್ರಷ್ಟ ಅಭ್ಯಾಸಗಳು’ ಎಂದು ಪರಿಗಣಿಸಲಾಗುತ್ತದೆ.

2024ರ ಲೋಕಸಭಾ ಚುನಾವಣೆಯ ಚುನಾವಣೆ ಸಂದರ್ಭ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ಹಾಗೂ ರಾಮ ಮಂದಿರದ ಪ್ರಸ್ತಾವಗಳನ್ನು ವ್ಯಾಪಕವಾಗಿ ಬಳಸಿರುವುದನ್ನು ‘thewire.in’ ವರದಿ ಮಾಡಿದೆ. ಅಲ್ಲದೆ, ಇದರಲ್ಲಿ ಚುನಾವಣಾ ಆಯೋಗದ ಪಾತ್ರದ ಕುರಿತು ಅದು ಪ್ರಶ್ನೆಗಳನ್ನು ಎತ್ತಿದೆ.

ಇದಲ್ಲದೆ, ಈ ಪೋಸ್ಟ್ ಪ್ರಜಾಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 126ರ ಅಡಿಯಲ್ಲಿ 48 ಗಂಟೆಗಳ ಮೌನದ ಅವಧಿಯಲ್ಲಿ ಪ್ರಕಟವಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷಗಳು ಮೌನ ಅನುಸರಿಸುವ ಅಗತ್ಯತೆ ಇದೆ ಹಾಗೂ ಪ್ರಚಾರ ಮಾಡುವಂತಿಲ್ಲ.

ಬಿಜೆಪಿಯ ಅಧಿಕೃತ ಹ್ಯಾಂಡಲ್‌ನಲ್ಲಿ ಗುರುವಾರ ಮಾಡಲಾದ ಪೋಸ್ಟ್‌ನಲ್ಲಿ, ‘‘ಒಂದು ಮತದ ಶಕ್ತಿ’’ ಎಂಬ ಶೀರ್ಷಿಕೆಯೊಂದಿಗೆ ಬುಧವಾರ ರಾಮನವಮಿಯಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ‘ಸೂರ್ಯ ತಿಲಕ’ ಕಾರ್ಯಕ್ರಮದ ಸಂದರ್ಭದ ಶ್ರೀರಾಮನ ಮೂರ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯದ ಪತ್ರಿಕಾ ಹೇಳಿಕೆಯ ಪ್ರಕಾರ ‘‘ಸೂರ್ಯ ತಿಲಕ’’ ಯೋಜನೆಯನ್ನು ಐಐಎಯ ತಂಡ ಆಯೋಜಿಸಿದೆ.

ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯು ಪದೇ ಪದೇ ಧರ್ಮದ ಆಧಾರದಲ್ಲಿ ಮತ ಯಾಚನೆ ಮಾಡುತ್ತಿದ್ದರೂ, ಚುನಾವಣಾ ಆಯೋಗ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದೆ, ದೂರುಗಳಿಗೆ ಸ್ಪಂದಿಸದೆ ಮೌನಕ್ಕೆ ಜಾರಿದೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News