ಭಾರತದಿಂದ ರಕ್ಷಣಾ ಸಾಮಗ್ರಿ ರಫ್ತು: ಅಗ್ರ ಖರೀದಿ ರಾಷ್ಟ್ರಗಳಿವು...

Update: 2024-10-28 03:26 GMT

PC: x.com/timesofindia

ಹೊಸದಿಲ್ಲಿ: ಅಮೆರಿಕ, ಫ್ರಾನ್ಸ್ ಮತ್ತು ಅರ್ಮೇನಿಯಾ, ಭಾರತದಿಂದ ಅತಿಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಾಗಿವೆ. 2023-24ನೇ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 21,083 ಕೋಟಿ ರೂಪಾಯಿ ಮೌಲ್ಯದ ಮಿಲಿಟರಿ ಸಾಧನಗಳನ್ನು ಮಾರಾಟ ಮಾಡಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಗೆ ರಫ್ತು ಮಾಡಲು ಆರಂಭಿಸಿರುವ ಭಾರತದ ಅಗ್ರಗಣ್ಯ ಗ್ರಾಹಕನಾಗಿ ಅರ್ಮೇನಿಯಾ ರೂಪುಗೊಂಡಿದೆ. ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, ಪಿನಾಕಾ ಬಹು ಉಡಾವಣೆ ರಾಕೆಟ್ ವ್ಯವಸ್ಥೆ ಮತ್ತು 155 ಎಂಎಂ ಆರ್ಟಿಲರಿ ಗನ್ ನಂಥ ಅಸ್ತ್ರಗಳನ್ನು ಅರ್ಮೇನಿಯಾ ಖರೀದಿಸುತ್ತಿದೆ.

ಭಾರತದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ಇದೀಗ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಫ್ಯೂಸ್ ಗಳನ್ನು ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿವೆ. ಇದರಲ್ಲಿ ಸಮಗ್ರ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳು, ಡ್ರೋನಿಯರ್-228 ವಿಮಾನ, ಆರ್ಟಿಲರಿ ಗನ್, ರಾಡಾರ್ ಗಳು, ಆಕಾಶ್ ಕ್ಷಿಪಣಿಗಳು, ಪಿನಾಕಾ ರಾಕೆಟ್ ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಸೇರಿವೆ.

ಆದರೆ ಅಮೆರಿಕಕ್ಕೆ ರಫ್ತಾಗುವ ಬಹುತೇಕ ವಸ್ತುಗಳು ಉಪ ವಿಭಾಗಗಳು ಮತ್ತು ಬಿಡಿಭಾಗಗಳು. ಜಾಗತಿಕ ರಕ್ಷಣಾ ಕಂಪನಿಗಳಾದ ಬೋಯಿಂಗ್ ಹಾಗೂ ಲಾಕ್ ಹೀಡ್ ಮಾರ್ಟಿನ್ ನಂಥ ಕಂಪನಿಗಳಿಗೆ ಫ್ಯೂಸ್ ಲೇಜ್, ರೆಕ್ಕೆಗಳು ಮತ್ತು ವಿಮಾನ ಹಾಗೂ ಹೆಲಿಕಾಪ್ಟರ್ ಗಳ ಇತರ ಭಾಗಗಳನ್ನು ಪೂರೈಸುತ್ತದೆ.

ಭಾರತದ ಶಸ್ತ್ರಾಸ್ತ್ರ ರಫ್ತು ಮೌಲ್ಯ 2014-15ರಲ್ಲಿ 1941 ಕೋಟಿ ರೂಪಾಯಿ ಇದ್ದುದು 2023-24ರ ವೇಳೆಗೆ 21083 ಕೋಟಿಗೆ ಹೆಚ್ಚಿದೆ. ಹಿಂದಿನ ಸೋವಿಯತ್ ಒಕ್ಕೂಟದ ದೇಶವಾಗಿರುವ ಅರ್ಮೇನಿಯಾ, ಭಾರತದಿಂದ ಕ್ಷಿಪಣಿಗಳು, ಆರ್ಟಿಲರಿ ಗನ್, ರಾಕೆಟ್ ಸಿಸ್ಟಂಗಳು, ಶಸ್ತ್ರಾಸ್ತ್ರ ಪತ್ತೆ ರಾಡಾರ್ ಗಳು, ಗುಂಡುನಿರೋಧಕ ಜಾಕೆಟ್ ಗಳು, ರಾತ್ರಿ-ದೃಷ್ಟಿ ಸಾಧನಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳೆದ ನಾಲ್ಕು ವರ್ಷಗಳಿಂದ ಆಮದು ಮಾಡಿಕೊಳ್ಳುತ್ತಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News