ರೂ. 72 ಲಕ್ಷ ಬೆಲೆಯ ಅಪರೂಪದ ಔಷಧದ ಉತ್ಪಾದನಾ ವೆಚ್ಚ ಕೇವಲ ರೂ. 3000!

Update: 2024-10-28 03:27 GMT

ಸಾಂದರ್ಭಿಕ ಚಿತ್ರ (freepik)

ತಿರುವನಂತಪುರ: ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ (ಎಸ್ಎಂಎ) ಎಂಬ ಅಪರೂಪದ ಕಾಯಿಲೆಯ ಔಷಧಕ್ಕೆ ಒಬ್ಬ ರೋಗಿಗೆ ಒಂದು ವರ್ಷಕ್ಕೆ ತಗುಲುವ ವೆಚ್ಚ ಸುಮಾರು 72 ಲಕ್ಷ ರೂಪಾಯಿಗಳು. ಪೇಟೆಂಟ್ ರಕ್ಷಣೆ ಮತ್ತು ಸ್ಥಳೀಯವಾಗಿ ಇದರ ಉತ್ಪಾದನೆ ಇಲ್ಲದ ಕಾರಣದಿಂದ ಇಷ್ಟೊಂದು ದುಬಾರಿ. ಆದರೆ ಸ್ಥಳೀಯವಾಗಿ ಇದರ ಉತ್ಪಾದನೆಗೆ ಅವಕಾಶ ನೀಡಿದರೆ ವಾರ್ಷಿಕ ಕೇವಲ 3000 ರೂಪಾಯಿ ವೆಚ್ಚದಲ್ಲಿ ಪ್ರತಿ ರೋಗಿಗೆ ಚಿಕಿತ್ಸೆ ನೀಡಬಹುದು. ಔಷಧ ವೆಚ್ಚ ತಜ್ಞರೊಬ್ಬರ ಈ ಅಭಿಪ್ರಾಯವನ್ನು ಕೇರಳ ಹೈಕೋರ್ಟ್ ಗೆ 24 ವರ್ಷದ ಎಸ್ಎಂಎ ರೋಗಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಮತ್ತು ಯೇಲ್ ವಿಶ್ವವಿದ್ಯಾನಿಲಯದ ಡಾ.ಮೆಲಿಸ್ಸಾ ಬಾರ್ಬರ್ ಅವರು ಅರ್ಜಿದಾರರ ಮನವಿಯ ಮೇರೆಗೆ ರಿಸ್ಡಿಪಾಮ್ ಎಂಬ ಔಷಧಿಯ ವೆಚ್ಚ ಲೆಕ್ಕಹಾಕಿದ್ದರು. ಈ ಔಷಧಿ ತಯಾರಿಸಲು ಬೇಕಾಗುವ ಔಷಧೀಯ ವಸ್ತುಗಳ ಬೆಲೆಯನ್ನು ಲೆಕ್ಕಾಚಾರ ಹಾಕಿ ಈ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಈ ಔಷಧಿಯನ್ನು ಪ್ರಸ್ತುತ ಒಂದು ಸೀಸೆಗೆ 11,170 ಡಾಲರ್ ಗೆ ಮಾರಾಟ ಮಾಡಲಾಗುತ್ತಿದ್ದು, ವಾಸ್ತವವಾಗಿ 60ಎಂಜಿ/80 ಎಂಎಲ್ ಸೀಸೆಗೆ 12.83 ಡಾಲರ್ ವೆಚ್ಚದಲ್ಲಿ ತಯಾರಿಸಬಹುದು. ಅಂದರೆ ಬೆಲೆಯನ್ನು ಶೇಕಡ 99ರಷ್ಟು ಇಳಿಸಲು ಅವಕಾಶವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವೆಚ್ಚ ಮತ್ತು ನೀಡುವ ವ್ಯವಸ್ಥೆ ಕಾರಣದಿಂದಾಗಿ ಎಸ್ಎಂಎ ರೋಗಿಗಳಿಗೆ ರಿಸ್ಡಿಪಾಮ್ ಹೆಚ್ಚಾಗಿ ಬಳಸಲಾಗುತ್ತದೆ ಎಂದು ಡಾ.ಬಾರ್ಬರ್ ಹೇಳಿದ್ದಾರೆ. ಇದನ್ನು ಕುಟುಂಬ ಸದಸ್ಯರು ಬಾಯಿಯ ಮೂಲಕ ನೀಡಬಹುದಾಗಿದೆ. ಆದರೆ ಇತರ ಎಸ್ಎಂಎ ಚಿಕಿತ್ಸೆಗಳು ಚುಚ್ಚುಮದ್ದು ಆಧರಿತವಾಗಿದೆ ಎಂದು ವಿವರಿಸಿದ್ದಾರೆ.

ರಿಸ್ಡಿಪಾಮ್ ಒಂದು ಸಣ್ಣ ಕಣದ ಔಷಧಿಯಾಗಿದ್ದು, ಇತರ ಎಸ್ಎಂಎ ಚಿಕಿತ್ಸೆಗಳಿಗೆ ಹೋಲಿಸಿದರೆ ಉತ್ಪಾದನೆ ಸಂಕೀರ್ಣತೆಯನ್ನು ಹೊಂದಿಲ್ಲ. ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವುದು ಕಾರ್ಯಸಾಧು ಮತ್ತು ಮಿತವ್ಯಯವೂ ಹೌದು ಎಂದು ವಿಶ್ಲೇಷಿಸಿದ್ದಾರೆ. ಔಷಧಿಯ ಮೂಲವಸ್ತು, ಉತ್ಪಾದನಾ ವೆಚ್ಚ ಹಾಗೂ ಪ್ಯಾಕೇಜಿಂಗ್ ವೆಚ್ಚ, ಲಾಭದ ಮೇಲಿನ ತೆರಿಗೆ ಎಲ್ಲವನ್ನೂ ಸೇರಿಸಿ ಈ ಮೊತ್ತವನ್ನು ನಿಗದಿಪಡಿಸಲಾಗಿದೆ. ಈ ಅಪರೂಪದ ಕಾಯಿಲೆ ಚಿಕಿತ್ಸೆಗೆ ಕೇರಳ ಸರ್ಕಾರ ವಾರ್ಷಿಕ ನೀಡುವ ನೆರವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದ್ದರೂ, ಇದರ ಉತ್ಪಾದನೆಯನ್ನು ಸ್ಥಳೀಯವಾಗಿ ಮಾಡದಿದ್ದರೆ ಚಿಕಿತ್ಸಾ ಹೊರೆಯನ್ನು ನಿಭಾಯಿಸುವುದು ಕಷ್ಟ ಎನ್ನುವುದು ಅರ್ಜಿದಾರರ ವಾದ. ದೇಶದಲ್ಲಿ ಇಂತಹ 2340 ಮಂದಿ ರೋಗಿಗಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News