ಗಾಝಾ ಯುದ್ಧ: ಸ್ಪೇನ್‌ನಾದ್ಯಂತ ಪ್ರತಿಭಟನೆಗಳು, ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ
ಹೊಸದಿಲ್ಲಿ: ಫೆಲೆಸ್ತೀನ್ ಜೊತೆ ಏಕತೆಯನ್ನು ಪ್ರದರ್ಶಿಸಿರುವ ಲಕ್ಷಾಂತರ ಜನರು ಸ್ಪೇನ್‌ನಾದ್ಯಂತ ಬೀದಿಗಿಳಿದು ಇಸ್ರೇಲ್‌ನ ಕ್ರಮಗಳನ್ನು ಖಂಡಿಸಿದ್ದಾರೆ. ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ನಾಗರಿಕ ಸಮಾಜ ಗುಂಪುಗಳು ಆಯೋಜಿಸಿರುವ ಪ್ರತಿಭಟನೆಯನ್ನು ಹಲವಾರು ರಾಜಕೀಯ ಪಕ್ಷಗಳು ಬೆಂಬಲಿಸಿವೆ. ಫೆಲೆಸ್ತೀನ್‌ನಲ್ಲಿ ನರಮೇಧವನ್ನು ಅಂತ್ಯಗೊಳಿಸುವಂತೆ ಕರೆ ನೀಡಿರುವ ಪ್ರತಿಭಟನಾಕಾರರು, ಸ್ಪೇನ್ ಇಸ್ರೇಲ್ ಜೊತೆ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಗಳ ನೇತೃತ್ವವನ್ನು ವಹಿಸಿದ್ದ ಪೊಡೆಮಸ್ ನಾಯಕಿ ಇಯೋನೆ ಬೆಲಾರಾ ಅವರು ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧವನ್ನು ಕೋರಿ ಸಂಸತ್ತಿನಲ್ಲಿ ನಿರ್ಣಯವನ್ನು ಮಂಡಿಸುವುದಾಗಿ ಪ್ರಕಟಿಸುತ್ತಿದ್ದಂತೆ ರ‍್ಯಾಲಿಗಳು ಇನ್ನಷ್ಟು ಕಾವು ಪಡೆದುಕೊಂಡವು.
ಸರಕಾರದಿಂದ ಪ್ರಾಮಾಣಿಕತೆಯ ಅಗತ್ಯವನ್ನು ಒತ್ತಿ ಹೇಳಿದ ಬೆಲಾರಾ, ಪ್ರಸ್ತುತ ಮೈತ್ರಿಕೂಟವು ಪೊಳ್ಳು ಭರವಸೆಗಳನ್ನು ನೀಡುತ್ತಿದೆ ಮತ್ತು ಫೆಲೆಸ್ತೀನ್‌ನ್ನು ಬೆಂಬಲಿಸಲು ಯಾವುದೇ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
‘ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರಲು ನಾವು ಸಂಸತ್ತಿನಲ್ಲಿ ಮಂಡಿಸಲಿರುವ ನಿರ್ಣಯದಲ್ಲಿ ನಾವು ಸರಕಾರದ ಪ್ರಾಮಾಣಿಕತೆಯನ್ನು ನೋಡಲಿದ್ದೇವೆ. ನರಮೇಧವನ್ನು ನಿಲ್ಲಿಸಲು ಅವರು ನಿಜಕ್ಕೂ ಬಯಸಿದ್ದರೆ ಮತ್ತು ಇಸ್ರೇಲ್ ಜೊತೆ ಕೈಜೋಡಿಸಲು ಬಯಸಿರದಿದ್ದರೆ ಅವರು ಶಸ್ತ್ರಾಸ್ತ್ರ ಮಾರಾಟವನ್ನು ನಿಷೇಧಿಸುತ್ತಾರೆ’ ಎಂದು ಬೆಲಾರಾ ಹೇಳಿದರು.
ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಭಾರೀ ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದರು.
ಪ್ರತಿಭಟನೆಯು ಫೆಲೆಸ್ತೀನ್ ಬೆಂಬಲಕ್ಕಾಗಿ ಸ್ಪೇನ್‌ನಲ್ಲಿಯ ವಿವಿಧ ಗುಂಪುಗಳ ನಡುವೆ ಏಕತೆಯನ್ನು ಎತ್ತಿ ತೋರಿಸಿದೆ.
ಇಸ್ರೇಲ್ ಜೊತೆ ಸ್ಪೇನ್‌ನ ಶಸ್ತ್ರಾಸ್ತ್ರಗಳ ವ್ಯಾಪಾರವನ್ನು ಅ.7ರಿಂದ ನಿಲ್ಲಿಸಲಾಗಿದೆ ಎಂಬ ವಿದೇಶಾಂಗ ಸಚಿವ ಜೋಸ್ ಮ್ಯಾನ್ಯುವೆಲ್ ಅಲ್ಬರೇಸ್ ಅವರ ಹೇಳಿಕೆಯನ್ನು ಟೀಕಿಸಿದ ಪ್ರತಿಭಟನಾಕಾರರು ಅದನ್ನು ಸುಳ್ಳು ಎಂದು ತಳ್ಳಿಹಾಕಿದರು. ಮಿಲಿಟರಿ ಕ್ಷೇತ್ರದಲ್ಲಿ ಸ್ಪೇನ್‌ನ ಕಂಪನಿಗಳು ಮತ್ತು ಇಸ್ರೇಲ್ ನಡುವೆ ಚಾಲ್ತಿಯಲ್ಲಿರುವ ಸಹಯೋಗವನ್ನು ಸೂಚಿಸುವ ವಾಣಿಜ್ಯ ದತ್ತಾಂಶಗಳನ್ನು ಅವರು ಉಲ್ಲೇಖಿಸಿದರು.
ಬಾರ್ಸಿಲೋನಾ, ಕೊರುನಾ, ಮಲಗಾ ಮತ್ತು ಟೆನೆರಿಫ್ ಸೇರಿದಂತೆ ನೂರಕ್ಕೂ ಅಧಿಕ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ.