ವೈದ್ಯರ ಪ್ರತಿಭಟನೆ: ಕೊಲ್ಕತ್ತಾ ಪೊಲೀಸ್ ಆಯುಕ್ತರ ತಲೆದಂಡ

Update: 2024-09-17 02:23 GMT

ಪೊಲೀಸ್ ಆಯುಕ್ತ ವಿನೀತ್ ಗೋಯಲ್ PC: x.com/abhijitmajumder

ಕೊಲ್ಕತ್ತಾ: ಇಲ್ಲಿನ ಆರ್. ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಗರ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅವರನ್ನು ವರ್ಗಾಯಿಸಿದ್ದಾರೆ. ಹಲವು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೂಡಾ ವರ್ಗಾಯಿಸಲಾಗಿದೆ.

ಪ್ರತಿಭಟನಾನಿರತ ವೈದ್ಯರ ಐದು ಅಂಶಗಳ ಬೇಡಿಕೆಯನ್ನು ಸ್ವೀಕರಿಸಿದ ಮಮತಾ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರು ಮತ್ತು ಆರೋಗ್ಯಸೇವೆಗಳ ನಿರ್ದೇಶಕ ಮತ್ತು ಆರ್. ಜಿ ಕರ್, ಸಂತ್ರಸ್ತೆಯ ಕುಟುಂಬಕ್ಕೆ ಲಂಚದ ಆಮಿಷ ಒಡ್ಡಿದ ಡೆಪ್ಯುಟಿ ಕಮಿಷನರ್ (ಉತ್ತರ ವಿಭಾಗ) ಅವರನ್ನು ಕೂಡಾ ವರ್ಗಾಯಿಸಲಾಗಿದೆ ಎಂದು ಪ್ರಕಟಿಸಿದರು.

ಸುಪ್ರೀಂಕೋರ್ಟ್ ನಲ್ಲಿ ನಾಳೆ ನಡೆಯುವ ಪ್ರಕರಣದ ವಿಚಾರಣೆ ಮುಗಿದ ಬಳಿಕ ಮಂಗಳವಾರ ಸಂಜೆ 4 ಗಂಟೆಗೆ ಹೊಸ ಪೊಲೀಸ್ ಆಯುಕ್ತರ ಹೆಸರನ್ನು ಪ್ರಕಟಿಸುವುದಾಗಿ ಮಮತಾ ಸ್ಪಷ್ಟಪಡಿಸಿದರು. ತಮ್ಮ ಕಾಳಿಘಾಟ್ ನಿವಾಸದಲ್ಲಿ ಪ್ರತಿಭಟನಾ ನಿರತ ಕಿರಿಯ ವೈದ್ಯರ ಜತೆ ಮಧ್ಯರಾತ್ರಿ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಬಹಿರಂಗಪಡಿಸಿದರು.

ವಿನೀತ್ ಗೋಯಲ್ ಅವರ ವರ್ಗಾವಣೆ ಪ್ರತಿಭಟನಾನಿರತ ವೈದ್ಯರ ಮುಖ್ಯ ಬೇಡಿಕೆಯಾಗಿತ್ತು. ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಹಾಗೂ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅವರು ಮಮತಾ ಬ್ಯಾನರ್ಜಿಯವರ ನಿಷ್ಠರು ಎನ್ನುವುದು ವಿರೋಧ ಪಕ್ಷಗಳ ಮತ್ತು ವೈದ್ಯರ ಆರೋಪ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News