ನಿಮ್ಮ ತಂದೆ-ತಾಯಿ ನನಗೆ ಮತ ಹಾಕದಿದ್ದರೆ ಊಟ ಮಾಡಬೇಡಿ: ಮಕ್ಕಳಿಗೆ ಹೇಳಿದ ಶಿವಸೇನೆ ಶಾಸಕ!
ಮುಂಬೈ : ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರೊಬ್ಬರು ತಮ್ಮ ಪೋಷಕರು ತನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಮಕ್ಕಳಿಗೆ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಚುನಾವಣಾ ಆಯೋಗವು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶನಗಳನ್ನು ಹೊರಡಿಸಿದ ಒಂದು ವಾರದ ನಂತರ ಮಹಾರಾಷ್ಟ್ರದ ಕಳಮ್ನೂರಿ ಶಾಸಕ ಸಂತೋಷ್ ಬಂಗಾರ್ ಅವರ ಹೇಳಿಕೆ ಬಂದಿದೆ. ಬಂಗಾರ್ ಅವರು ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದಾಗ ಶಾಲಾ ಮಕ್ಕಳಿಗೆ “"ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ, ಎರಡು ದಿನ ಊಟ ಮಾಡಬೇಡಿ” ಎಂದು ಹೇಳುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ.
ವಿದ್ಯಾರ್ಥಿಗಳು ತಿನ್ನಲು ನಿರಾಕರಿಸುವುದನ್ನು ಪೋಷಕರು ಪ್ರಶ್ನಿಸಿದರೆ, "ಸಂತೋಷ್ ಬಂಗಾರ್ ಅವರಿಗೆ ಮತ ನೀಡಿ, ಆಗ ಮಾತ್ರ ನಾವು ತಿನ್ನುತ್ತೇವೆ" ಎಂದು ಉತ್ತರಿಸುವಂತೆ ಶಾಸಕ ಹೇಳುತ್ತಿರುವು ವೀಡಿಯೊದಲ್ಲಿದೆ. 10 ವರ್ಷಕ್ಕಿಂತ ಕೆಳಗಿನ ಮಕ್ಕಳ ಮುಂದೆ ಶಾಸಕರು ʼಚುನಾವಣಾ ಭಾಷಣʼ ಮಾಡಿದ್ದಾರೆ. ನಂತರ ಶಾಸಕರು ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬುದರ ಕುರಿತು ತಮ್ಮ ಪೋಷಕರ ಮುಂದೆ ಹೇಳುವುದನ್ನು ಪುನರಾವರ್ತಿಸಿ ಮತ್ತು ಹೇಳುವಂತೆ ಮಕ್ಕಳಿಗೆ ಹೇಳಿದ್ದಾರೆ.
ಬಂಗಾರ್ ಅವರ ಹೇಳಿಕೆಗೆ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಎನ್‌ಸಿಪಿ-ಎಸ್‌ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, "ಬಂಗಾರ್ ಅವರು ಶಾಲಾ ಮಕ್ಕಳಿಗೆ ಹೇಳಿರುವುದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಆಯೋಗವು ಪೂರ್ವಾಗ್ರಹವಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಅವರು “ಪಕ್ಷದ ಶಾಸಕರೊಬ್ಬರು ಶಾಲಾ ಮಕ್ಕಳಿಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವಾಗ ರಾಜ್ಯದ ಶಿಕ್ಷಣ ಸಚಿವರು ನಿದ್ದೆ ಮಾಡುತ್ತಿದ್ದಾರಾ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಗಾರ್ ಅವರು ವಿವಾದಿತ ಹೇಳಿಕೆಗಳಿಗೆ ಹೆಸರುವಾಸಿ. ಕಳೆದ ತಿಂಗಳು, 2024 ರ ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಹಬ್ಬದ ರ‍್ಯಾಲಿ ಯಲ್ಲಿ ಕತ್ತಿ ಝಳಪಿಸಿದ್ದರು ಎಂಬ ಆರೋಪದ ಮೇಲೆ ಕಳಂನೂರಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. 2022 ರಲ್ಲಿ, ಕ್ಯಾಟರಿಂಗ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ವೀಡಿಯೊ ವೈರಲ್ ಆಗಿತ್ತು.