ಮಾದಕ ದ್ರವ್ಯ ಇರಿಸಿದ್ದ ಪ್ರಕರಣ: ಸಂಜೀವ್ ಭಟ್ ರ ಅರ್ಜಿವಜಾಗೊಳಿಸಿದ ಸುಪ್ರೀಂ ಕೋರ್ಟ್; ರೂ. 3 ಲಕ್ಷ ದಂಡ
ಹೊಸ ದಿಲ್ಲಿ: ರಾಜಸ್ಥಾನ ಮೂಲದ ವಕೀಲರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ತಾನು ಮಾದಕ ದ್ರವ್ಯಗಳನ್ನು ಇರಿಸಿದ್ದೆ ಎಂಬ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪಕ್ಷಪಾತ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು indianexpress.com ವರದಿ ಮಾಡಿದೆ.
ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ರಾಜೇಶ್ ಬಿಂದಾಲ್ ಅವರನ್ನೊಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠವು, ಸಂಜೀವ್ ಭಟ್ ಸಲ್ಲಿಸಿದ್ದ ಮೂರೂ ಅರ್ಜಿಗಳಿಗೂ ತಲಾ ರೂ. ಒಂದು ಲಕ್ಷದಂತೆ ರೂ. ಮೂರು ಲಕ್ಷ ದಂಡ ವಿಧಿಸಿದ್ದು, ಆ ಮೊತ್ತವನ್ನು ಗುಜರಾತ್ ಹೈಕೋರ್ಟ್ ವಕೀಲರ ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ಸೂಚಿಸಿದೆ.
ಇದಕ್ಕೂ ಮುನ್ನ, ಪ್ರಕರಣದ ವಿಚಾರಣೆಯನ್ನು ಶ್ರಾವ್ಯ ಮತ್ತು ದೃಶ್ಯ ದಾಖಲೆಗಳ ವಿಚಾರಣಾ ನ್ಯಾಯಾಲಯಗಳ ಕಲಾಪಕ್ಕೆ ವರ್ಗಾಯಿಸಬೇಕು ಹಾಗೂ 19 ಸಾಕ್ಷಿಗಳಿಗೆ ಸಮನ್ಸ್ ರವಾನಿಸಲು ಅನುಮತಿ ನೀಡಬೇಕು ಎಂದು ತಾವು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಸಂಜೀವ್ ಭಟ್ ಈ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು.
ಸಂಜೀವ್ ಭಟ್ ಪದೇ ಪದೇ ನ್ಯಾಯಾಲಯದ ಮೆಟ್ಟಿಲೇರುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು. “ಎಷ್ಟು ಬಾರಿ ನೀವು ಸುಪ್ರೀಂ ಕೋರ್ಟ್ ಗೆ ಬಂದಿದ್ದೀರಿ? ಕನಿಷ್ಠ ಒಂದು ಡಝನ್ ಬಾರಿ?” ಎಂದು ನ್ಯಾ. ವಿಕ್ರಮ್ ನಾಥ್ ಖಾರವಾಗಿ ಪ್ರಶ್ನಿಸಿದರು.
ಈ ಹಿಂದೆ, ಮಾದಕ ದ್ರವ್ಯ ಇರಿಸಿದ್ದ ಪ್ರಕರಣದ ವಿಚಾರಣೆಯನ್ನು ಮಾರ್ಚ್ 31, 2023ರೊಳಗೆ ಮುಕ್ತಾಯಗೊಳಿಸಬೇಕು ಎಂದು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಸಂಜೀವ್ ಭಟ್ ಗೆ ರೂ. 10,000 ದಂಡ ವಿಧಿಸಿದ್ದ ಘಟನೆಯನ್ನು ನ್ಯಾಯಪೀಠವು ಮತ್ತೆ ಸ್ಮರಿಸಿಕೊಂಡಿತು.
ಆದರೆ, ಸಂಜೀವ್ ಭಟ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ದೇವದತ್ ಕಾಮತ್, ತಮ್ಮ ಕಕ್ಷಿದಾರರು ವಿಚಾರಣೆಯನ್ನು ವಿಳಂಬಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದರು. ಒಂದು ವೇಳೆ ಸಾಕ್ಷಿಗಳನ್ನು ಪರೀಕ್ಷಿಸಬೇಕು ಎಂದು ನಾನು ಬಯಸಿದರೆ, ಅದು ಹೇಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಗಳ ಪೈಕಿ ಒಂದರಲ್ಲಿ ಪ್ರಾಸಿಕ್ಯೂಷನ್ ಒದಗಿಸಿದ್ದ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಲಾಗಿತ್ತಾದರೂ, ಆ ಮನವಿಯನ್ನು ಕೈಬಿಡಲಾಗಿತ್ತು. ಯಾಕೆಂದರೆ, ಆ ಸಾಕ್ಷಿಗಳು ಪ್ರಾಸಿಕ್ಯೂಷನ್ ಪಾಲಿಗೆ ಪ್ರತಿಕೂಲಕರವಾಗಿದ್ದವು ಎಂದೂ ಅವರು ವಾದಿಸಿದರು.
ಈ ಘಟನೆಯು 1996ರಲ್ಲಿ ಸಂಜೀವ್ ಭಟ್ ಅವರು ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ನಡೆದಿತ್ತು ಎಂದು ಆರೋಪಿಸಲಾಗಿದೆ.