ಚುನಾವಣಾ ಬಾಂಡ್ ಯೋಜನೆಯು ಪಿಎಂಎಲ್‌ಎಗೆ ವಿರುದ್ಧವಾಗಿದೆ, ಆಡಳಿತ ಪಕ್ಷಕ್ಕೆ ಅನುಕೂಲಕರವಾಗಿದೆ: ಜಿಎನ್‌ಸಿ ವರದಿ

Update: 2023-11-04 13:10 GMT

ಸಾಂದರ್ಭಿಕ ಚಿತ್ರ.| Photo: PTI

ಮುಂಬೈ: ಚುನಾವಣಾ ಬಾಂಡ್ ಯೋಜನೆಯನ್ನು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಚೌಕಟ್ಟಿಗೊಳಪಡಿಸಬೇಕು ಎಂದು ಎಫ್‌ಎಟಿಎಫ್ ಕುರಿತ ಗ್ಲೋಬಲ್ ಎನ್‌ಪಿಒ ಕೋಲಿಷನ್ (ಜಿಎನ್‌ಸಿ) ತನ್ನ ಇತ್ತೀಚಿನ ವರದಿಯಲ್ಲಿ ಪ್ರತಿಪಾದಿಸಿದೆ. ಚುನಾವಣಾ ಬಾಂಡ್‌ಗಳ ಅನಾಮಧೇಯ ಸ್ವರೂಪವು ಅಕ್ರಮ ಹಣ ವರ್ಗಾವಣೆಯ ಮತ್ತು ಭ್ರಷ್ಟಾಚಾರದ ಗಮನಾರ್ಹ ಅಪಾಯವನ್ನು ಹೊಂದಿದೆ ಮತ್ತು ಆಡಳಿತ ಪಕ್ಷಕ್ಕೆ ಅನುಕೂಲಗಳ ಕುರಿತು ತಿಳಿದುಕೊಳ್ಳುವ ನಾಗರಿಕರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ. ಚುನಾವಣಾ ಬಾಂಡ್ ಯೋಜನೆಯು ಪ್ರಜಾಪ್ರಭುತ್ವದಲ್ಲಿ ಒಡ್ಡುವ ಸಂಕೀರ್ಣ ಬೆದರಿಕೆಯತ್ತ ವರದಿಯು ಗಮನ ಹರಿಸಿದೆ.

1989ರಲ್ಲಿ ಜಿ-7 ದೇಶಗಳಿಂದ ಸ್ಥಾಪಿಸಲ್ಪಟ್ಟ ಎಫ್‌ಎಟಿಎಫ್ ಅಂತರ್‌ಸರಕಾರಿ ಸಂಸ್ಥೆಯಾಗಿದ್ದು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆ ಮತ್ತು ಅಣ್ವಸ್ತ್ರ ಪ್ರಸರಣ ಹಣಕಾಸು ವ್ಯವಸ್ಥೆಗೆ ಕಡಿವಾಣ ಹಾಕಲು ಜಾಗತಿಕ ಕ್ರಮವನ್ನು ಮುನ್ನಡೆಸುತ್ತದೆ.

ಜಿಎನ್‌ಸಿಯು ಭಯೋತ್ಪಾದಕ ಕಾನೂನುಗಳನ್ನು ಅಸ್ತ್ರವನ್ನಾಗಿಸಿಕೊಳ್ಳುವ ಭಾರತದ ಪ್ರಯತ್ನಗಳ ಕುರಿತು ತನ್ನ ಅಧ್ಯಯನದೊಂದಿಗೆ,ಚುನಾವಣಾ ಬಾಂಡ್ ಯೋಜನೆಯು ದೇಶದಲ್ಲಿ ಒಡ್ಡಿರುವ ಬೆದರಿಕೆಗಳನ್ನು ಪರಿಶೀಲಿಸುವಂತೆ ಎಫ್‌ಎಟಿಎಫ್ ಅನ್ನು ಒತ್ತಾಯಿಸುತ್ತಿದೆ.

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳಿಗೆ ಅವಕಾಶ ಕಲ್ಪಿಸಿರುವ ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಅ.31ರಂದು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಮೂರು ದಿನಗಳ ವಿಚಾರಣೆಯ ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿರುವ ಸಂದರ್ಭದಲ್ಲಿಯೇ ಜಿಎನ್‌ಸಿಯ ವರದಿಯು ಹೊರಬಿದ್ದಿದೆ.

ಚುನಾವಣಾ ಬಾಂಡ್ ಯೋಜನೆಯು ಅಪಾರದರ್ಶಕವಾಗಿರುವುದು ಮಾತ್ರವಲ್ಲ,ಅದು ಕಾನೂನು ಮಾರ್ಗಗಳ ಮೂಲಕ ಅಕ್ರಮ ಹಣ ವರ್ಗಾವಣೆಯ ಮಹಾಪೂರಕ್ಕೆ ಕಾರಣವಾಗುತ್ತದೆ ಎಂದು ವಾದಿಸಿರುವ ವರದಿಯು,ಯೋಜನೆಯು ಒದಗಿಸಿರುವ ಅನಾಮಧೇಯತೆಯು ಪತ್ತೆ ಹಚ್ಚಲು ಅಸಾಧ್ಯವಾಗುವ ನಿಗೂಢ ಮತ್ತು ಅನಿರ್ದಿಷ್ಟ ದೇಣಿಗೆಗಳಿಗೆ ರತ್ನಗಂಬಳಿಯನ್ನು ಹಾಸುತ್ತದೆ ಎಂದು ಹೇಳಿದೆ.

ಭಾರತೀಯ ರಿಜರ್ವ್ ಬ್ಯಾಂಕ್ 2017ರಲ್ಲಿಯೇ ಚುನಾವಣಾ ಬಾಂಡ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಜಿಎನ್‌ಸಿ ಬೆಟ್ಟು ಮಾಡಿದೆ. ಆಗಿನ ಆರ್‌ಬಿಐ ಗವರ್ನರ್ ಕೇಂದ್ರ ವಿತ್ತ ಸಚಿವಾಲಯಕ್ಕೆ ಬರೆದಿದ್ದ ಪತ್ರದಲ್ಲಿ ಯೋಜನೆಯು ಬಾಂಡ್‌ಗಳನ್ನು ಖರೀದಿಸುವ ಮಧ್ಯವರ್ತಿ ವ್ಯಕ್ತಿಗಳು/ಸಂಸ್ಥೆಗಳ ಗುರುತನ್ನು ಬಹಿರಂಗಗೊಳಿಸುವುದಿಲ್ಲ ಮತ್ತು ತನ್ಮೂಲಕ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್‌ಎ)ಯ ಧ್ಯೇಯೋದ್ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದರು.

2018ರಲ್ಲಿ ಚುನಾವಣಾ ಆಯೋಗವೂ ಇಂತಹುದೇ ಕಳವಳಗಳನ್ನು ವ್ಯಕ್ತಪಡಿಸಿತ್ತು. ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಬರೆದಿದ್ದ ಪತ್ರದಲ್ಲಿ ಆಯೋಗವು,ಚುನಾವಣಾ ಬಾಂಡ್ ಯೋಜನೆಯು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಏಕೈಕ ಉದ್ದೇಶಕ್ಕಾಗಿ ಶೆಲ್ ಕಂಪನಿಗಳ ಸ್ಥಾಪನೆಯ ಸಾಧ್ಯತೆಯನ್ನು ತೆರೆಯುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಗಳನ್ನು ಸರಕಾರವು ಕಡೆಗಣಿಸಿದ್ದು ಮಾತ್ರವಲ್ಲ,ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಯಾವುದೇ ಕಳವಳವನ್ನು ವ್ಯಕ್ತಪಡಿಸಿಲ್ಲ ಎಂದು ಸಹಾಯಕ ವಿತ್ತ ಸಚಿವರು ಸಂಸತ್ತಿನಲ್ಲಿ ಸುಳ್ಳು ಹೇಳಿಕೆಯನ್ನೂ ನೀಡಿದ್ದರು.

ಚುನಾವಣಾ ಬಾಂಡ್ ಯೋಜನೆಯಲ್ಲಿ ದೇಣಿಗೆದಾರನ ಅನಾಮಧೇಯತೆಗೆ ಅವಕಾಶ ಕಲ್ಪಿಸಿರುವುದು ಎಫ್‌ಎಟಿಎಫ್‌ನ ಉಲ್ಲಂಘನೆಯಾಗಿದೆ ಎಂದು ಜಿಎನ್‌ಸಿ ವರದಿಯು ಬೆಟ್ಟು ಮಾಡಿದೆ.

ಚುನಾವಣಾ ಬಾಂಡ್ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಶಿಫಾರಸು ಮಾಡಿರುವ ವರದಿಯು,ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡುವವರೆಗೆ ಅದನ್ನು ಅಮಾನತುಗೊಳಿಸಬೇಕು ಎಂದು ಒತ್ತಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News