ಪ್ರಧಾನಿ ಮೋದಿ ಆದ್ಯತೆಗಳನ್ನು ಪರಿಗಣಿಸುವಲ್ಲಿ ಎಡವಿದ್ದಾರೆ: ಮಣಿಪುರದ ಬಿಜೆಪಿ ಶಾಸಕ ಅಸಮಾಧಾನ

Update: 2023-07-24 08:23 GMT

ಹೊಸದಿಲ್ಲಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಮಣಿಪುರ ಹಿಂಸಾಚಾರದ ಭೀಬತ್ಸತೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇಂದ್ರ ಹಾಗೂ ಮಣಿಪುರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳ ಸಾಮರ್ಥ್ಯವನ್ನು ಪ್ರಶ್ನಾರ್ಹಗೊಳಿಸಿದೆ.

newslaundry.comನ ಶಿವನಾರಾಯಣ ರಾಜಪುರೋಹಿತ್ ಅವರಿಗೆ ಕುಕಿ ಸಮುದಾಯದಕ್ಕೆ ಸೇರಿದ ಬಿಜೆಪಿ ಶಾಸಕ ಪೋಲಿಯೆನ್‌ಲಾಲ್ ಹಾಕಿಪ್ ಅವರು ನೀಡಿದ ಸಂದರ್ಶನದಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ, ಕೇಂದ್ರ ಸರ್ಕಾರದ ಕ್ರಮಗಳು ಮತ್ತು ಸಂಘರ್ಷದ ಮೂಲ ಕಾರಣದ ಬಗ್ಗೆ ಮಾತನಾಡಿದರು. ಉದ್ವಿಗ್ನತೆ ಮತ್ತು ಶಾಂತಿ ಸ್ಥಾಪನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಅವರು ಗಮನ ಹರಿಸಿದ್ದಾರೆ. .

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಸೈಕೋಟ್‌ ಕ್ಷೇತ್ರದ ಬಿಜೆಪಿ ಶಾಸಕ ಪೋಲಿಯೆನ್‌ಲಾಲ್ ಹಾಕಿಪ್ ಅವರು, ಮಣಿಪುರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆಗಳು ತಪ್ಪಾಗಿದೆ ಎಂದು ಹಾಕಿಪ್‌ ಹೇಳಿದ್ದಾರೆ. ತಾನೂ ಹಾಗೂ ಮಣಿಪುರದ ಹಲವಾರು ಶಾಸಕರು ಇನ್ನೂ ಪ್ರಧಾನಿಯನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಾವಾದ ಈಗಲೂ ಇದೆ ಎಂದು ಅವರು ಹೇಳಿದರು.

ಸಾಮಾನ್ಯ ಜನರಿಗೆ ಮಾತ್ರವಲ್ಲ, ಚುನಾಯಿತ ಶಾಸಕನಾದ ನನಗೂ ಇಂಫಾಲದಲ್ಲಿ (ಮಣಿಪುರ ರಾಜಧಾನಿ) ಹೋಗಿ ವಿಧಾನಸಭೆಯಲ್ಲಿ ಭಾಗವಹಿಸಲು ಭದ್ರತೆ ಇದೆ ಎಂದು ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳವು ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಅತ್ಯಂತ ಕೆಟ್ಟದಾಗಿದೆ, ಅವು ಅವನತಿಯನ್ನು ತೋರಿಸುತ್ತವೆ ಎಂದು ಹಾಕಿಪ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಗುರಿ ಮಾಡಿದ ಅವರು, ಇಂತಹ ಭೀಕರ ಹಿಂಸಾಚಾರದ ಬಗ್ಗೆ ಒಂದು ವಾರ ಮೌನವಾಗಿರುವುದೂ ಹೆಚ್ಚು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯ ಅಮೇರಿಕ ಭೇಟಿಯನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಅವರ ಆದ್ಯತೆಯೇ ಬೇರೆ, ಸಂಪೂರ್ಣ ತಪ್ಪಾದ ಆದ್ಯತೆಯಿಂದ ಅವರು ಹೆಜ್ಜೆಯಿಟ್ಟಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕಕ್ಕೆ ತೆರಳುವ ಮುನ್ನ ಜನಪ್ರತಿನಿಧಿಗಳಾಗಿ ನಾವು ಪ್ರಧಾನಿ ಭೇಟಿಗೆ ಅವಕಾಶ ಕೇಳಿದ್ದೆವು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅವರಿಗೆ ತಿಳಿಸುವ ಅವಕಾಶಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News