ಪಾಕಿಸ್ತಾನದ ಪರ ಬೇಹುಗಾರಿಕೆ ; ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿ ಸತೇಂದ್ರ ಸಿವಾಲ್ ಬಂಧನ

Update: 2024-02-04 09:52 GMT

Photo: ndtv.com

ಲಕ್ನೋ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೀರತ್‌ನಲ್ಲಿ ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು ಸತೇಂದ್ರ ಸಿವಾಲ್ ಎಂದು ಗುರುತಿಸಲಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕಾರ್ಯನಿರ್ವಹಿಸುತ್ತಿನು ಎಂದು ndtv ವರದಿ ಮಾಡಿದೆ.

ಐಎಸ್‌ಐ ಹ್ಯಾಂಡ್ಲರ್‌ಗಳು ಭಾರತೀಯ ವಿದೇಶಾಂಗ ಸಚಿವಾಲಯದ ಉದ್ಯೋಗಿಗಳನ್ನು ಆಕರ್ಷಿಸಿ ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗೆ ಬದಲಾಗಿ ಹಣಕಾಸಿನ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ಎಟಿಎಸ್ ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಅದರಂತೆ ಕಾರ್ಯಾಚರಣೆಗಿಳಿದ ಭಯೋತ್ಪಾದನಾ ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ.

ಹಾಪುರ್‌ನ ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿ ಸತೇಂದ್ರ ಸಿವಾಲ್ ಈ ಬೇಹುಗಾರಿಕೆ ಜಾಲದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೌಪ್ಯ ದಾಖಲೆಗಳನ್ನು ಹೊರತೆಗೆಯುತ್ತಿದ್ದ ಎನ್ನಲಾಗಿದೆ. ಆರೋಪಿಗಳು ಹಣದ ದುರಾಸೆಗೆ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಸೇನಾ ಸಂಸ್ಥೆಗಳ ಕಾರ್ಯತಂತ್ರದ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ISI ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಯ ಕಾರ್ಯಚಟುವಟಿಕೆಯ ಮೇಲೆ ಎಟಿಎಸ್ ಕಣ್ಣಿಟ್ಟಿತ್ತು. ಬಳಿಕ ಸತೇಂದ್ರ ಸಿವಾಲ್ ನನ್ನು ವಿಚಾರಣೆಗಾಗಿ ಮೀರತ್‌ನಲ್ಲಿರುವ ಎಟಿಎಸ್ ಕ್ಷೇತ್ರ ಘಟಕಕ್ಕೆ ಕರೆಸಲಾಯಿತು. ವಿಚಾರಣೆಯ ಸಮಯದಲ್ಲಿ, ಆರೋಪಿ ತೃಪ್ತಿದಾಯಕ ಉತ್ತರಗಳನ್ನು ನೀಡಲು ವಿಫಲರಾಗಿದ್ದಾನೆ ಎಂದು ವರದಿಯಾಗಿದೆ. ಅಂತಿಮವಾಗಿ ಗೂಢಚಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸತೇಂದ್ರ ಸಿವಾಲ್ 2021 ರಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ (IBSA) ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News