ಬೆಂಗಳೂರಿಗೆ ಬಂದರೂ, ಹುತಾತ್ಮ ಯೋಧ ಪ್ರಾಂಜಲ್ ಮನೆಗೆ ಹೋಗದ ಪ್ರಧಾನಿ ಮೋದಿ!
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದ ಪ್ರಧಾನಿ, ಆ ಬಳಿಕ ಚುನಾವಣಾ ಪ್ರಚಾರಕ್ಕೆ ತೆಲಂಗಾಣಕ್ಕೆ ಪ್ರಯಾಣಿಸಿದರು ಎಂದು ತಿಳಿದು ಬಂದಿದೆ.
ಆದರೆ ಬೆಂಗಳೂರಿಗೆ ಬಂದಿದ್ದರೂ, ಜಮ್ಮುವಿನ ರಜೌರಿಯಲ್ಲಿ ಹುತಾತ್ಮನಾದ ಬೆಂಗಳೂರಿನ ಯೋಧ ಪ್ರಾಂಜಲ್ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸದೇ, ಅವರ ಕುಟುಂಬ ಸದಸ್ಯರನ್ನು ಭೇಟಿಯಾಗದೆ ಪ್ರಧಾನಿ ಮೋದಿ ಇಲ್ಲಿಂದ ನಿರ್ಗಮಿಸಿದ್ದಾರೆ. ಅವರ ಅಧಿಕೃತ ಭೇಟಿಯಂತೆ 12.15ಕ್ಕೆ ಬೆಂಗಳೂರು ತೊರೆದ ಮೋದಿ, ಮಧ್ಯಾಹ್ನ 2.45ರಿಂದ 3.25ರ ವರೆಗೆ ತೆಲಂಗಾಣದ ಕಮರೆಡ್ಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು ಎಂದು ತಿಳಿದು ಬಂದಿದೆ.
ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ 9.15ಕ್ಕೆ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಗೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸಕಾರ್ಯಗಳನ್ನು ಪರಿಶೀಲಿಸಿದರು. ಬಳಿಕ ದೇಶೀಯವಾಗಿ ನಿರ್ಮಿತ ಲೈಟ್ ಕಾಂಬ್ಯಾಟ್ ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು.
ಬಳಿಕ ಪ್ರಧಾನಿ “ತೇಜಸ್‌ನಲ್ಲಿ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅನುಭವವು ತುಂಬಾ ಚೆನ್ನಾಗಿತ್ತು. ನಮ್ಮ ದೇಶದಲ್ಲಿ ಇಂತಹ ನಿರ್ಮಾಣ ಸಾಮರ್ಥ್ಯಗಳ ಕುರಿತಂತೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ಹೆಮ್ಮೆ ಮತ್ತು ಆಶಾಭಾವನೆ ಮೂಡಿಸಿದೆ,” ಸಾಮಾಜಿಕ ಜಾಲತಾಣ ʼxʼನಲ್ಲಿ ಫೊಟೋದೊಂದಿಗೆ ಪೋಸ್ಟ್ ಹಂಚಿಕೊಂಡರು.
ಆದರೆ ಬೆಂಗಳೂರಿಗೆ ಬಂದರೂ, ಹುತಾತ್ಮ ಯೋಧ ಪ್ರಾಂಜಲ್ ಮನೆಗೆ ಅಥವಾ ಪಾರ್ಥವ ಶರೀರ ವೀಕ್ಷಿಸಲು ತೆರಳದ ಪ್ರಧಾನಿ ಮೋದಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣ 'Xʼನಲ್ಲಿ ಆಕ್ರೋಶ ವ್ಯಕ್ತವಾಗಿದೆ.ಪ್ರಾಂಜಲ್ ಅವರ ಪಾರ್ಥೀವ ಶರೀರ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಅಂತ್ಯ ಕ್ರಿಯೆಗೆ ಸೋಮಸುಂದರ ಪಾಳ್ಯದಲ್ಲಿರುವ ಸ್ಮಶಾನಕ್ಕೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಬೆಳಗ್ಗೆ 11 ಗಂಟೆಗೆ ಜಿಗಣಿಯ ನಂನವನ ಎಕ್ಸ್ಟೆನ್ಷನ್ ನಲ್ಲಿರುವ ಪ್ರಾಂಜಲ್ ಮನೆಯಿಂದ ಸೇನಾ ವಾಹನದಲ್ಲಿ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಹೊತ್ತ ಮೆರವಣಿಗೆ ಪ್ರಾರಂಭವಾಯಿತು.
Photo : PTI
ಜಿಗಣಿ ಒಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯರಸ್ತೆ, ನೈಸ್ ರಸ್ತೆ, ಕೋನಪ್ಪನ ಅಗ್ರಹಾರ ವೃತ್ತ ಹಾದು ಕೂಡ್ಲು ಗೇಟ್ ಮೂಲಕ ಮನೆಯಿಂದ ಸ್ಮಶಾನದವರೆಗೆ ಸಾಗಿದ 23 ಕಿ.ಮೀ ದೂರದ ಮೆರವಣಿಗೆಯಲ್ಲಿ ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿದರು. ಸ್ಮಶಾನ ತಲುಪಿದಾಗ ಮಧ್ಯಾಹ್ನ 3 ಗಂಟೆಯಾಗಿತ್ತು. ಬಳಿಕ ಅಂತ್ಯಕ್ರಿಯೆ ನಡೆಯಿತು.
ಆ ಹೊತ್ತಿಗೆ ಪ್ರಧಾನಿ ತೆಲಂಗಾಣ ತಲುಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
@politics_2022 ಎನ್ನುವ ಬಳಕೆದಾರರರು “ಪ್ರಧಾನ ಮಂತ್ರಿ (ಬಿಜೆಪಿ) vs ಮುಖ್ಯಮಂತ್ರಿ (INC)̤ ನರೇಂದ್ರ ಮೋದಿ: ಅವರು ಬೆಂಗಳೂರಿನಲ್ಲಿ ತೇಜಸ್ ವಿಮಾನದಲ್ಲಿ ಸವಾರಿ ಮಾಡುತ್ತಿದ್ದಾರೆ ಮತ್ತು ತಮ್ಮ ಪ್ರಚಾರಕ್ಕಾಗಿ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಬಿಜೆಪಿ ಐಟಿ ಸೆಲ್ ಅದನ್ನು ವೈರಲ್ ಮಾಡುತ್ತಿದೆ. ಸಿದ್ದರಾಮಯ್ಯ: ಇದೇ ಬೆಂಗಳೂರಿನಲ್ಲಿ ಕ್ಯಾಪ್ಟನ್ ಎಂವಿ ಪ್ರಾಂಜಲ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಯಾವುದೇ ಪ್ರಚಾರ ಅಥವಾ ಸಹಾನುಭೂತಿ ಬಯಸುತ್ತಿಲ್ಲ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯತೆಯನ್ನು ಅರ್ಥಮಾಡಿಕೊಳ್ಳಲು ಸರಳವಾದ ಹೋಲಿಕೆಯಾಗಿದೆ. ಜನರು ಈಗಲೂ ಬಿಜೆಪಿಯನ್ನು ರಾಷ್ಟ್ರದ ಪರ ಎಂದು ಕುರುಡಾಗಿ ನಂಬುತ್ತಾರೆ. ಈ ಸಾಮಾನ್ಯ INC ಅನ್ನು ರಾಷ್ಟ್ರವಿರೋಧಿ ಎಂದು ಹೇಳುತ್ತಾರೆ. ಅರಿವು ಮುಖ್ಯ” ಎಂದು ಪೋಸ್ಟ್ ಮಾಡಿದ್ದಾರೆ.
@smalltowner ಎನ್ನುವ ಬಳಕೆದಾರರು ಬೆಂಗಳೂರಿನಲ್ಲಿ ಚುನಾವಣೆ ಇರಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.