ವಿಚಾರಣೆ ನಡೆಸದೆ ಆರೋಪಿಗಳನ್ನು ಸುದೀರ್ಘ ಕಾಲ ಜೈಲಿನಲ್ಲಿ ಇಡುವಂತಿಲ್ಲ: ಸುಪ್ರೀಂ ಕೋರ್ಟ್

Update: 2023-12-08 09:02 GMT

ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಶ್ವದ ಅತಿ ದೊಡ್ಡ ಮದ್ಯ ಉದ್ಯಮದ ಸೋದರ ಸಂಸ್ಥೆಯಾದ ಪೆರ್ನೋಡ್ ರಿಕಾರ್ಡ್ ಇಂಡಿಯಾದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಬೆನೋಯ್ ಬಾಬು ಅವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, “ವಿಚಾರಣೆಗೂ ಮುನ್ನವೇ ನೀವು ಆರೋಪಿಗಳನ್ನು ಸುದೀರ್ಘ ಕಾಲ ಜೈಲಿನಲ್ಲಿ ಇಡುವಂತಿಲ್ಲ. ಇದು ಸಮರ್ಪಕವಲ್ಲ” ಎಂದು ಅಭಿಪ್ರಾಯ ಪಟ್ಟಿದೆ" ಎಂದು ndtv.com ವರದಿ ಮಾಡಿದೆ.

“ಇದು ಹೇಗೆ ಮುಂದೆ ಹೋಗುತ್ತದೆ ಎಂಬುದು ನಮಗಿನ್ನೂ ತಿಳಿದಿಲ್ಲ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಆರೋಪಗಳ ನಡುವೆ ವೈರುಧ್ಯ ಇರುವಂತೆ ನಮಗೆ ತೋರುತ್ತಿದೆ” ಎಂದು ನ್ಯಾ. ಸಂಜೀವ್ ಖನ್ನಾ ಅಭಿಪ್ರಾಯ ಪಟ್ಟರು.

ಆರೋಪಿ ಬಾಬು ಈಗಾಗಲೇ 13 ತಿಂಗಳ ಕಾಲ ಸೆರೆವಾಸ ಅನುಭವಿಸಿರುವುದು ಹಾಗೂ ಅವರ ಅರ್ಜಿಯಲ್ಲಿ ವಾಸ್ತವ ಸನ್ನಿವೇಶಗಳಿರುವುದನ್ನು ಆಧರಿಸಿ ನ್ಯಾ. ಎಸ್.ವಿ.ಎನ್.ಭಟ್ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು, ಅವರಿಗೆ ಜಾಮೀನು ಮಂಜೂರು ಮಾಡುವಂತೆ ನಿರ್ದೇಶಿಸಿತು.

ಈ ಪ್ರಕರಣದಲ್ಲಿ ಹಲವಾರು ಮಂದಿ ಬಂಧನಕ್ಕೀಡಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಮುಖ್ಯವಾಗಿ ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನಡುವೆ. ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇಬ್ಬರು ಹಿರಿಯ ಆಪ್ ಸದಸ್ಯರನ್ನೂ ಈ ಪ್ರಕರಣದಡಿ ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News