ನಕಲಿ ವೈದ್ಯರು, ಮೃತ ರೋಗಿಗಳು: ದಕ್ಷಿಣ ದಿಲ್ಲಿಯಲ್ಲಿಯ ವಂಚಕ ವೈದ್ಯಕೀಯ ಜಾಲ ಬಯಲಾಗಿದ್ದು ಹೇಗೆ?

Update: 2023-11-16 12:32 GMT

Photo : NDTV  

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಐಷಾರಾಮಿ ಗ್ರೇಟರ್ ಕೈಲಾಷ ಪ್ರದೇಶದಲ್ಲಿ ಹಲವಾರು ರೋಗಿಗಳ ಸಾವಿಗೆ ಕಾರಣವಾಗಿದ್ದ ವಂಚಕ ವೈದ್ಯಕೀಯ ಜಾಲವೊಂದನ್ನು ಪೋಲಿಸರು ಭೇದಿಸಿದ್ದಾರೆ. ದಕ್ಷಿಣ ದಿಲ್ಲಿಯಲ್ಲಿನ ಕ್ಲಿನಿಕ್ ಒಂದರಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಇಬ್ಬರು ರೋಗಿಗಳ ಸಾವುಗಳಿಗೆ ಸಂಬಂಧಿಸಿದಂತೆ ಅಗರವಾಲ್ ಮೆಡಿಕಲ್ ಸೆಂಟರ್ ನಡೆಸುತ್ತಿರುವ ಡಾ.ನೀರಜ್ ಅಗರವಾಲ್, ಆತನ ಪತ್ನಿ ಹಾಗೂ ಸರ್ಜನ್ ಸೋಗು ಧರಿಸಿದ್ದ ಪೂಜಾ ಅಗರವಾಲ್, ಡಾ.ಜಸಪ್ರೀತ್ ಸಿಂಗ್ ಮತ್ತು ಮಾಜಿ ಲ್ಯಾಬೊರೇಟರಿ ಟೆಕ್ನಿಷಿಯನ್ ಮಹೇಂದ್ರ ಸಿಂಗ್ ಅವರನ್ನು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.

ಪೋಲಿಸರು ತಿಳಿಸಿರುವಂತೆ 2022ರಲ್ಲಿ ಅಸ್ಗರ್ ಅಲಿ ಎನ್ನುವವರು ಪಿತ್ತಕೋಶ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನುರಿತ ಸರ್ಜನ್ ಡಾ.ಜಸಪ್ರೀತ್ ಅವರು ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ಅವರಿಗೆ ಮೊದಲು ತಿಳಿಸಲಾಗಿತ್ತು. ಆದರೆ ಡಾ.ಜಸಪ್ರೀತ್ ಬದಲು ಪೂಜಾ ಮತ್ತು ಮಹೇಂದ್ರ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದರು.

ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರಬಂದ ಬಳಿಕ ಅಲಿ ತೀವ್ರ ನೋವನ್ನು ಅನುಭವಿಸುತ್ತಿದ್ದರು ಮತ್ತು ಅವರನ್ನು ಸಫ್ದರಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರು ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದರು.

ಡಾ.ಅಗರವಾಲ್ ಮತ್ತು ಇತರ ಮೂವರು ಸ್ಥಾಪಿತ ವೈದ್ಯಕೀಯ ಶಿಷ್ಟಾಚಾರಗಳನ್ನು ಅನುಸರಿಸದೆ ಹಲವಾರು ರೋಗಿಗಳ ಪ್ರಮುಖ ಅಂಗಾಂಗಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ರೋಗಿಗಳ ಕುಟುಂಬಗಳು ಆರೋಪಿಸಿವೆ. ದೂರುಗಳ ಪ್ರಕಾರ ಡಾ.ಅಗರವಾಲ್ ಫಿಜಿಷಿಯನ್ ಆಗಿದ್ದಾರೆ, ಆದರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಾರೆ. ಇದಕ್ಕಾಗಿ ಅವರು ನಕಲಿ ದಾಖಲೆಗಳನ್ನು ಹೊಂದಿದ್ದಾರೆ ಎಂದು NDTV ವರದಿ ಮಾಡಿದೆ.

2016ರಿಂದ ಡಾ.ಅಗರವಾಲ್, ಪೂಜಾ ಮತ್ತು ಅಗರವಾಲ್ ಮೆಡಿಕಲ್ ಸೆಂಟರ್ ವಿರುದ್ಧ ಕನಿಷ್ಠ ಏಳು ದೂರುಗಳು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಎಲ್ಲ ಏಳೂ ಪ್ರಕರಣಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ರೋಗಿಗಳು ಮೃತಪಟ್ಟಿದ್ದರು.

ನಾಲ್ವರು ವೈದ್ಯರ ತಂಡವೊಂದು ನ.1ರಂದು ಅಗರವಾಲ್ ಮೆಡಿಕಲ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತ್ತು, ಈ ವೇಳೆ ಬಹಳಷ್ಟು ಕೊರತೆಗಳು ಮತ್ತು ನ್ಯೂನತೆಗಳು ಗಮನಕ್ಕೆ ಬಂದಿವೆ ಎಂದು ತಿಳಿಸಿದ ಡಿಸಿಪಿ ಚಂದನ ಚೌಧರಿಯವರು, ರೋಗಿಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಅಗರವಾಲ್ ತಿರುಚುತ್ತಿದ್ದರು ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ ಎಂದರು.

ಕೇವಲ ವೈದ್ಯರ ಸಹಿಗಳಿರುವ 414 ಖಾಲಿ ಪ್ರಿಸ್ಕ್ರಿಪ್ಶನ್ ಚೀಟಿಗಳು, ಕ್ಲಿನಿಕ್ ನಲ್ಲಿ ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಿದ್ದ ರೋಗಿಗಳ ವಿವರಗಳಿರುವ ಎರಡು ರಿಜಿಸ್ಟರ್ಗಳು,ಆಸ್ಪತ್ರೆಗಳನ್ನು ಹೊರತುಪಡಿಸಿ ಕ್ಲಿನಿಕ್ ಇತ್ಯಾದಿಗಳಲ್ಲಿ ದಾಸ್ತಾನಿರಿಸಲು ಅವಕಾಶವಿಲ್ಲದ ಹಲವಾರು ನಿಷೇಧಿತ ಔಷಧಿಗಳು ಮತ್ತು ಚುಚ್ಚುಮದ್ದುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಅಗರವಾಲ್ ನಿವಾಸ ಮತ್ತು ಕ್ಲಿನಿಕ್ನಿಂದ ಅವಧಿ ಮೀರಿದ ಸರ್ಜಿಕಲ್ ಬ್ಲೇಡ್ ಗಳು, ಹಲವಾರು ರೋಗಿಗಳಿಗೆ ಸೇರಿದ ಮೂಲ ಪ್ರಿಸ್ಕ್ರಿಪ್ಶನ್ ಚೀಟಿಗಳು,47 ವಿವಿಧ ಬ್ಯಾಂಕುಗಳ ಚೆಕ್ ಪುಸ್ತಕಗಳು,54 ಎಟಿಎಂ ಕಾರ್ಡ್ಗಳು, ಹಲವಾರು ಅಂಚೆ ಕಚೇರಿಗಳ ಪಾಸ್ ಬುಕ್ಗಳು, ಆರು ಪಿಒಎಸ್ ಟರ್ಮಿನಲ್ ಕ್ರೆಡಿಟ್ ಕಾರ್ಡ್ ಯಂತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News