ಮಣಿಪುರ: ಮಾಧ್ಯಮಗಳ ವರದಿಗಾರಿಕೆ ಬಗ್ಗೆ ಸತ್ಯಶೋಧನಾ ವರದಿ ಹೊರತಂದ ಎಡಿಟರ್ಸ್ ಗಿಲ್ಡ್ ಅಧ್ಯಕ್ಷ, ತಂಡದ ಮೂವರು ಸದಸ್ಯರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕುರಿತು ಮಾಧ್ಯಮಗಳ ವರದಿಗಾರಿಕೆ ಬಗ್ಗೆ ಬಿಡುಗಡೆಗೊಳಿಸಿದ ವರದಿಗಾಗಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರು ಹಾಗೂ ಸಂಸ್ಥೆಯ ಸತ್ಯಶೋಧನಾ ತಂಡದ ಮೂವರು ಸದಸ್ಯರ ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆಯಾದರೂ ಇದೇ ಸೆಕ್ಷನ್ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸೆಕ್ಷನ್ ಅನ್ವಯ ಯಾರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ. ನಿಂದನಾತ್ಮಕ ಆನ್ಲೈನ್ ಪೋಸ್ಟ್ ಮಾಡುವ ಯಾರನ್ನೇ ಆದರೂ ಬಂಧಿಸಿ ಜೈಲಿಗೆ ತಳ್ಳುವ ಅಧಿಕಾರವನ್ನು ಈ ಸೆಕ್ಷನ್ 66ಎ ಸರಕಾರಕ್ಕೆ ನೀಡುತ್ತದೆ.
ಐಟಿ ಕಾಯಿದೆ ಹೊರತಾಗಿ ಐಪಿಸಿಯ ಕೆಲವೊಂದು ಸೆಕ್ಷನ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷೆ ಸೀಮಾ ಮುಸ್ತಾಫ, ಸತ್ಯಶೋಧನಾ ತಂಡದ ಸೀಮಾ ಗುಹಾ, ಭರತ್ ಭೂಷಣ್ ಮತ್ತು ಸಂಜಯ್ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ವರದಿಯು ಸುಳ್ಳು [ಮತ್ತು ಪ್ರವರ್ತಿತ] ಎಂದು ದೂರಿನಲ್ಲಿ ಹೇಳಲಾಗಿದೆ. ಕುಕಿ ನಿವಾಸವೊಂದರಿಂದ ಹೊಗೆ ಕಾಣಿಸುತ್ತದೆ ಎಂದು ವರ್ಣಿಸುವ ಫೋಟೋ ಒಂದು ಈ ವರದಿಯಲ್ಲಿದ್ದರೆ ವಾಸ್ತವವಾಗಿ ಅದು ಅರಣ್ಯ ಅಧಿಕಾರಿಯೊಬ್ಬರ ಕಚೇರಿಯಾಗಿದ್ದು. ಈ ವರದಿ ಸುಳ್ಳು ಮತ್ತು ಕುಕಿ ತೀವ್ರಗಾಮಿಗಳಿಂದ ಪ್ರವರ್ತಿತವಾಗಿದೆ ಎಂದು ಇದರಿಂದ ತಿಳಿಯುತ್ತದೆ,” ಎಂದು ದೂರಿನಲ್ಲಿ ಹೇಳಲಾಗಿದೆ.
ಈ ನಿರ್ದಿಷ್ಟ ಫೋಟೋ ಶೀರ್ಷಿಕೆಯಲ್ಲಾದ ತಪ್ಪಿಗೆ ಎಡಿಟರ್ಸ್ ಗಿಲ್ಡ್ ರವಿವಾರ ಕ್ಷಮೆ ಕೋರಿದೆ ಹಾಗೂ ಸಂಪಾದನೆ ಹಂತದಲ್ಲಿ ಈ ದೋಷ ಉಂಟಾಗಿದೆ ಎಂದು ಹೇಳಿದೆ.
ವರದಿಯಲ್ಲೇನಿದೆ?
ಮಣಿಪುರದ ಪತ್ರಕರ್ತರು ಪ್ರಕಟಿಸುವ ವರದಿಗಳು “ಏಕಪಕ್ಷೀಯವಾಗಿದೆ,” ಎಂದು ಎಡಿಟರ್ಸ್ ಗಿಲ್ಡ್ ಸತ್ಯ ಶೋಧನಾ ವರದಿಯಲ್ಲಿ ಹೇಳಲಾಗಿದೆ.
“ಸಾಮಾನ್ಯವಾಗಿ ವರದಿಗಳನ್ನು ಸಂಪಾದಕರು, ಬ್ಯುರೋ ಮುಖ್ಯಸ್ಥರು ಪರಿಶೀಲಿಸುತ್ತಾರೆ ಮತ್ತು ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ಪಡೆಗಳು ನಿಗಾ ವಹಿಸುತ್ತವೆ ಆದರೆ ಸಂಘರ್ಷದ ಸಮಯದಲ್ಲಿ ಇದು ಸಾಧ್ಯವಾಗಿಲ್ಲ,” ಎಂದು ವರದಿ ಹೇಳಿದೆ.
ಮಣಿಪುರದಲ್ಲಿರುವ ಇಂಟರ್ನೆಟ್ ಸ್ಥಗಿತದಿಂದಾಗಿ ಅಲ್ಲಿಂದ ವರದಿ ಮಾಡುವುದು ಕಷ್ಟಕರವಾಗಿದೆ. ಕುಕಿ ಬಾಹುಳ್ಯ ಜಿಲ್ಲೆಗಳಾದ ಚುರಚಂದಪುರ್, ಕಂಗ್ಪೊಕ್ಪಿ ಮತ್ತು ತೆಂಗ್ನೌಪಲ್ನಿಂದ ತಳಮಟ್ಟದ ವರದಿಗಾರಿಕೆ ಸಂಘರ್ಷಗಳು ಆರಂಭಗೊಂಡ ಕೆಲವೇ ದಿನಗಳಲ್ಲಿ ನಿಂತು ಹೋಗಿದೆ ಎಂದು ವರದಿ ಹೇಳಿದೆ.
ಮಾಧ್ಯಮಗಳು ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿ ಪ್ರಕಟಿಸಿದ ಕನಿಷ್ಠ 10 ಉದಾಹರಣೆಗಳು ಈ ವರದಿಯಲ್ಲಿವೆ. “ನಕಲಿ ಸುದ್ದಿಗಳಿಂಧ ಈ ಜನಾಂಗೀಯ ಕಂದರ ಇನ್ನಷ್ಟು ಆಳವಾಯಿತು,” ಎಂದು ವರದಿ ಹೇಳಿದೆ.
“ಇಂಫಾಲದಲ್ಲಿನ ಮಾಧ್ಯಮಗಳು ಅಸ್ಸಾಂ ರೈಫಲ್ಸ್ ಬಗೆ ವ್ಯತಿರಿಕ್ತವಾಗಿ ಬರೆದಿದೆ ಹಾಗೂ ಇದಕ್ಕೆ ರಾಜ್ಯ ಸರ್ಕಾರದ ಬೆಂಬಲವೂ ಇತ್ತು ಹಾಗೂ ಅಸ್ಸಾಂ ರೈಫಲ್ಸ್ ವಿರುದ್ಧ ಎಫ್ಐಆರ್ ದಾಖಲಿಸಲು ಮಣಿಪುರ ಪೊಲೀಸರಿಗೆ ಅನುಮತಿಸಿತ್ತು,” ಎಂದು ವರದಿ ಹೇಳಿದೆ.
ಮಣಿಪುರದಲ್ಲಿನ ಹಿಂಸಾಚಾರ “ಸರ್ಕಾರ ಪ್ರವರ್ತಿತ” ಎಂದು ಹೇಳಿದ ಬೇರೊಂದು ಸತ್ಯಶೋಧನಾ ತಂಡದ ಮೂವರ ವಿರುದ್ಧ ಕೂಡ ಮಣಿಪುರ ಪೊಲೀಸರು ಜುಲೈ ತಿಂಗಳಲ್ಲಿ ಕೇಸ್ ದಾಖಲಿಸಿದ್ದರು. ಆಗ ಸಿಪಿಐ ಮಹಿಳಾ ಘಟಕವಾದ ನ್ಯಾಷನಲ್ ಫೆಡರೇಶನ್ ಆಪ್ ಇಂಡಿಯನ್ ವಿಮೆನ್ನ ಆನ್ನಿ ರಾಜಾ, ನಿಶಾ ಸಿದ್ಧು ಹಾಗೂ ದಿಲ್ಲಿ ಮೂಲದ ವಕೀಲೆ ದೀಕ್ಷಾ ತ್ರಿವೇದಿ ವಿರುದ್ಧ ಪ್ರಕರಣ ದಾಖಲಾಗಿತ್ತು.