ಕೇಂದ್ರ ಸರಕಾರದ ವೈಫಲ್ಯಗಳ ಕಡೆಗೆ ಗಮನ ಹರಿಸಿ: ಸನಾತನ ಚರ್ಚೆಯಲ್ಲಿ ತೊಡಗಿರುವ ಡಿಎಂಕೆ ನಾಯಕರಿಗೆ ಸ್ಟಾಲಿನ್‌ ಕರೆ

Update: 2023-09-14 05:51 GMT

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ (PTI)

ಚೆನ್ನೈ: ಸನಾತನ ಧರ್ಮದ ಕುರಿತು ಚರ್ಚೆ ಬಿಟ್ಟು ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತಾಡಿ ಎಂದು ಡಿಎಂಕೆ ನಾಯಕರಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕರೆ ನೀಡಿದ್ದಾರೆ.

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ (INDIA) ಹುಟ್ಟಿಕೊಂಡಿದೆ ಎಂದು ತಮಿಳುನಾಡು ಸಚಿವ ಕೆ. ಪೊನ್ಮುಡಿ ಅವರು ಹೇಳಿಕೆ ನೀಡಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿದ ಸಿಎಂ ಸ್ಟಾಲಿನ್‌, ಸನಾತನ ಧರ್ಮದ ವಿಚಾರವನ್ನು ಕೆದಕುವ ಬಿಜೆಪಿಯ ದಿಕ್ಕು ತಪ್ಪಿಸುವ ತಂತ್ರಗಳಿಗೆ ಬೀಳದಂತೆ ಕರೆ ನೀಡಿದ್ದಾರೆ. ಅದರ ಬದಲಾಗಿ ಮಣಿಪುರ ಹಿಂಸಾಚಾರ, ಅದಾನಿ ವಿವಾದ ಮತ್ತು ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತಾಡಿ ಎಂದು ಹೇಳಿದ್ದಾರೆ.

“ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ದೈನಂದಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೌನ ವಹಿಸಿದರೆ, ಅವರ ಸಚಿವ ಸಂಪುಟವು ಸುಳ್ಳು ನಿರೂಪಣೆಗಳನ್ನು ಹರಡುವ ಮೂಲಕ ಸನಾತನ ಧರ್ಮದ ಮೇಲೆ ಚರ್ಚೆಗಳನ್ನು ಕೇಂದ್ರೀಕರಿಸುತ್ತದೆ. ಮಣಿಪುರ ಹಿಂಸಾಚಾರ, ಅದಾನಿ ಹಿಂಡೆನ್‌ಬರ್ಗ್, ಸಿಎಜಿ ವರದಿಯಲ್ಲಿ ಎತ್ತಿರುವ 7.50 ಲಕ್ಷ ಕೋಟಿ ರೂಪಾಯಿ ಹಗರಣಗಳು ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಬಿಜೆಪಿಗೆ ಪ್ರಶ್ನೆಗಳನ್ನು ಹಾಕುವುದನ್ನು ಮುಂದುವರಿಸಲು ಮತ್ತು ದಿಕ್ಕು ತಪ್ಪಿಸುವ ತಂತ್ರಗಳಿಗೆ ಪ್ರತಿಕ್ರಿಯಿಸದಂತೆ ನಮ್ಮ ಡಿಎಂಕೆ ನಾಯಕರು ಮತ್ತು ಕಾರ್ಯಕರ್ತರನ್ನು ನಾನು ಕೇಳುತ್ತೇನೆ” ಎಂದು ಎಂಕೆ ಸ್ಟಾಲಿನ್‌ ಟ್ವೀಟ್‌ ಮಾಡಿದ್ದಾರೆ.

“ನಾವು ಪ್ರಶ್ನೆಗಳನ್ನು ಹಾಕುತ್ತಲೇ ಇರುತ್ತೇವೆ ಮತ್ತು ಇಂಡಿಯಾ ಕೂಡಾ” ಎಂದು ಅವರು ಬರೆದಿದ್ದಾರೆ.

ಸನಾತನ ಧರ್ಮದ ಬಗೆಗಿನ ಡಿಎಂಕೆ ನಾಯಕರ ಹೇಳಿಕೆಯಿಂದ ವಿಪಕ್ಷಗಳ ಒಕ್ಕೂಟಕ್ಕೆ ತೀವ್ರ ಹಿನ್ನಡೆಯಾಗುತ್ತಿದ್ದು, ಸನಾತನದ ಬಗ್ಗೆ ಚರ್ಚಿಸದಂತೆ ಒಕ್ಕೂಟದ ಇತರೆ ಪಕ್ಷದ ನಾಯಕರು ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News