ವಿದ್ಯುತ್ ಬಿಲ್ ಪಾವತಿ ಹೆಸರಿನಲ್ಲಿ ವಂಚನೆ | 3 ಲಕ್ಷ ರೂ. ಕಳೆದುಕೊಂಡ 77 ವರ್ಷದ ವಯೋವೃದ್ಧರು
ಮುಂಬೈ: ಇತ್ತೀಚೆಗೆ 77 ವರ್ಷದ ವಯೋವೃದ್ಧರೊಬ್ಬರು ನಾಜೂಕು ವಿದ್ಯುತ್ ಬಿಲ್ ಪಾವತಿ ವಂಚನೆಯ ನೂತನ ಬಲಿಪಶುವಾಗಿದ್ದು, ಸುಮಾರು ರೂ. 3 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ. ತನ್ನನ್ನು ತಾನು ವಿದ್ಯುಚ್ಛಕ್ತಿ ಪೂರೈಕೆ ಸಂಸ್ಥೆಯ ಪ್ರತಿನಿಧಿ ಎಂದು ಸೋಗು ಹಾಕಿರುವ ವ್ಯಕ್ತಿಯೊಬ್ಬ 77 ವರ್ಷದ ವಯೋವೃದ್ಧರೊಬ್ಬರನ್ನು ಗುರಿಯಾಗಿಸಿಕೊಂಡಿದ್ದು, ಪಾವತಿಯಾಗದ ವಿದ್ಯುತ್ ಬಿಲ್ ಗಳನ್ನು ಮುಂದು ಮಾಡಿ, ಅವರಲ್ಲಿ ವಿದ್ಯುಚ್ಛಕ್ತಿ ಪೂರೈಕೆ ಕಡಿತಗೊಳ್ಳುವ ಭೀತಿಯನ್ನು ಸೃಷ್ಟಿಸಿ, ಆ ಭೀತಿಯನ್ನು ತನ್ನ ಲಾಭಕ್ಕೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ವೈದ್ಯರೂ ಆದ ಆ ವಯೋವೃದ್ಧರ ಅಳಲು ಫೆಬ್ರವರಿ 23ರಂದು ಅಪರಿಚಿತ ಸಂಖ್ಯೆಯ ಮೂಲಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಸಂದೇಶವನ್ನು ಸ್ವೀಕರಿಸುವ ಮೂಲಕ ಪ್ರಾರಂಭಗೊಂಡಿದೆ. ಆ ಸಂದೇಶದಲ್ಲಿ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಇಂದೇ ಪಾವತಿಸದಿದ್ದರೆ ಕೂಡಲೇ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿದೆ. ಈ ಸಂದೇಶವು ಬಾಂಬೆ ಉಪನಗರ ವಿದ್ಯುಚ್ಛಕ್ತಿ ಪೂರೈಕೆ ಸಂಸ್ಥೆಯೊಂದಿಗೆ ತಳುಕು ಹಾಕಿಕೊಂಡಿತ್ತು. ಆ ಸಂದೇಶದಿಂದ ಒತ್ತಡಕ್ಕೆ ಒಳಗಾಗಿರುವ ಆ ಹಿರಿಯರು, ಮನಸ್ಸಿಲ್ಲದಿದ್ದರೂ, ಆ ಸಂದೇಶದಲ್ಲಿ ಒದಗಿಸಲಾಗಿದ್ದ ಸಂಖ್ಯೆಗೆ ಕರೆ ಮಾಡಿದ್ದಾರೆ. ವಿದ್ಯುಚ್ಛಕ್ತಿಯನ್ನು ಮರು ಸ್ಥಾಪಿಸಲು ಅವರಿಂದ ರೂ. 10 ಅನ್ನು ಬಲವಂತವಾಗಿ ವಸೂಲಿ ಮಾಡಲಾಗಿದೆ. ಇದರ ಬೆನ್ನಿಗೇ, ಅವರು ಆ ಸಂದೇಶದ ಕೊಂಡಿಯಲ್ಲಿ ನೀಡಲಾಗಿದ್ದ ಸೂಚನೆಗಳನ್ನು ಪಾಲಿಸಿದ್ದು, ತಮಗೇ ತಿಳಿಯದಂತೆ ತಮ್ಮ ಡೆಬಿಟ್ ಕಾರ್ಡ್ ನ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ.
ಆ ವೈದ್ಯರು ಎಷ್ಟೇ ಎಚ್ಚರಿಕೆಯಿಂದಿದ್ದರೂ, ಅವರ ಬ್ಯಾಂಕ್ ಖಾತೆಯಿಂದ ಐದು ಅನಧಿಕೃತ ವಹಿವಾಟುಗಳು ನಡೆದಿವೆ. ಇದಲ್ಲದೆ ತನ್ನ ಖಾತೆಯಲ್ಲಿನ ಮೊತ್ತವನ್ನು ಯಾವುದೇ ಒಟಿಪಿ ಪರಿಶೀಲನೆ ಇಲ್ಲದೆ ಪಡೆದುಕೊಂಡಿರುವುದೂ ಆ ವೈದ್ಯರ ಗಮನಕ್ಕೆ ಬಂದಿದೆ. ಇದು ಅವರಲ್ಲಿ ವಂಚನೆಯ ಅನುಮಾನವನ್ನು ಮೂಡಿಸಿದ್ದು, ಯಾವುದೇ ಒಟಿಪಿ ಸಂದೇಶವಿಲ್ಲದೆ ವಹಿವಾಟು ನಡೆದಿರುವುದು ಅವರ ಅಚ್ಚರಿಗೆ ಕಾರಣವಾಗಿದೆ. ನಂತರ ಅವರು ಈ ಘಟನೆಯನ್ನು ಸೈಬರ್ ಸೆಲ್ ಗೆ ವರದಿ ಮಾಡಿದ್ದು, ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್ ಗಳಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ವಂಚನೆ, ಸೋಗು ಹಾಗೂ ಕ್ರಿಮಿನಲ್ ಪಿತೂರಿ ಸೆಕ್ಷನ್ ಗಳು ಸೇರಿವೆ.
ನಂತರ, ಮತ್ತಷ್ಟು ತನಿಖೆಯನ್ನು ಕೈಗೊಂಡಾಗ, ವಂಚಕನು ಒಳ ಬರುವ ಕರೆಗಳನ್ನು ಬಚ್ಚಿಡಲು ಕಾಲ್ ಫಾರ್ವರ್ಡಿಂಗ್ ತಂತ್ರವನ್ನು ಬಳಸಿದ್ದಾರೆ ಹಾಗೂ ಅಸಮರ್ಪಕ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಆ ವಂಚಕನು ವೈದ್ಯರ ವಾಟ್ಸ್ ಆ್ಯಪ್ ಖಾತೆಗೂ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ವಂಚಕನು ವೈದ್ಯರ ಇ-ವ್ಯಾಲೆಟ್ ಗೆ ಅನಧಿಕೃತ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಅವರ ಆಧಾರ್ ಕಾರ್ಡ್ ವಿವರಗಳನ್ನೂ ತಿರುಚಿದ್ದಾನೆ. ಅಷ್ಟರ ಮಟ್ಟಿಗೆ ಇದೊಂದು ಅತ್ಯಂತ ವ್ಯವಸ್ಥಿತ ಪೂರ್ವಯೋಜಿತ ಕೃತ್ಯ ಎಂಬುದು ಸಾಬೀತಾಗಿದೆ.