ಲೇಖಕರಿಗೆ ಬೆದರಿಕೆ ಪತ್ರ ಬರೆಯುತ್ತಿದ್ದವನಿಗೆ ಗೌರಿ ಹಂತಕರ ನಂಟು : ತನಿಖಾ ಸಂಸ್ಥೆಗಳು
ಬೆಂಗಳೂರು : ರಾಜ್ಯದ ಹಲವಾರು ಪ್ರಮುಖ ಬರಹಗಾರರಿಗೆ ಬೆದರಿಕೆ ಪತ್ರ ಬರೆದು ಕಿರುಕುಳ ನೀಡುತ್ತಿದ್ದ ಆರೋಪಿ ಶಿವಾಜಿ ರಾವ್ ಜಾಧವ್ ಗೆ ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೈದ ತಂಡದ ನಂಟಿರುವುದು ತನಿಖೆಯಲ್ಲಿ ಬಯಲಾಗಿದೆ.
ಒಂದು ವರ್ಷದಿಂದ ರಾಜ್ಯದ ಹಲವಾರು ಪ್ರಮುಖ ಬರಹಗಾರರಿಗೆ ಬೆದರಿಕೆ ಪತ್ರ ಬರೆದು ಕಿರುಕುಳ ನೀಡುತ್ತಿದ್ದ ದಾವಣಗೆರೆ ಮೂಲದ ಶಿವಾಜಿ ರಾವ್ ನನ್ನು ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು. ಆರೋಪಿ ಶಿವಾಜಿ ರಾವ್ ಜಾಧವ್ ಗೆ ಸುಜಿತ್ ಕುಮಾರ್ ಎಂಬಾತನ ಸಂರ್ಪಕವಿರುವುದು ತನಿಖೆಯಲ್ಲಿ ಬಯಲಾಗಿದೆ. ಸುಜಿತ್ ಕುಮಾರ್ ಎಂಬಾತ ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೈದ ತಂಡಕ್ಕೆ ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡುತ್ತಿದ್ದ ಎಂದು the hindu ವರದಿ ಮಾಡಿದೆ
ತನಿಖಾ ಸಂಸ್ಥೆಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಸುಜಿತ್ ಕುಮಾರ್ ನನ್ನು ಪ್ರವೀಣ್ ಮತ್ತು ಮಂಜುನಾಥ್ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. ಈತ ಹೆಚ್ಚಾಗಿ ಪ್ರಬಲ ಹಿಂದುತ್ವ ಗುಂಪುಗಳಲ್ಲಿರುವ ಮತ್ತು ಅಪರಾಧಗಳನ್ನು ಮಾಡುವ ಸಾಮರ್ಥ್ಯವಿರುವ ಯುವಕರನ್ನು ಗುರುತಿಸುತ್ತಿದ್ದ. ಬಳಿಕ ಅವರನ್ನು ಸೆಳೆದು ತೀವ್ರ ಬಲಪಂಥೀಯ ಚಿಂತನೆಗಳನ್ನು ತುಂಬುತ್ತಿದ್ದ. ಅವರನ್ನು 2013 ಮತ್ತು 2017 ರ ನಡುವೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಾಲ್ವರು ಬರಹಗಾರರು ಮತ್ತು ಹೋರಾಟಗಾರರನ್ನು ಹತ್ಯೆಗೈದ ಆರೋಪವಿರುವ ಗೋವಾ ಮೂಲದ ಸನಾತನ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕಕ್ಕೆ ಬರುವಂತೆ ಮಾಡುತ್ತಿದ್ದ ಎನ್ನಲಾಗಿದೆ.
ಗೌರಿ ಲಂಕೇಶ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸುಜಿತ್ ಕುಮಾರ್ ನನ್ನು 13 ನೇ ಆರೋಪಿ ಎಂದು ಪಟ್ಟಿ ಮಾಡಲಾಗಿದೆ. ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಗೌರಿ ಲಂಕೇಶ್ ಗೆ ಶೂಟ್ ಮಾಡಿದ ಆರೋಪಿ ಪರಶುರಾಮ್ ವಾಘ್ಮೋರೆಯನ್ನು ಸುಜಿತ್ ಕುಮಾರ್ ನೇಮಕ ಮಾಡಿದ್ದ ಎನ್ನುವ ಆಘಾತಕಾರಿ ಅಂಶ ಆರೋಪಪಟ್ಟಿಯಲ್ಲಿದೆ ಎನ್ನಲಾಗಿದೆ.
2018 ರಲ್ಲಿ ಸುಜಿತ್ ಕುಮಾರ್ ಬಂಧನವಾಗಿತ್ತು. ಆತನಿಂದ ವಶಪಡಿಸಿಕೊಂಡ ಡೈರಿಯಲ್ಲಿ ಶಿವಾಜಿ ರಾವ್ ಜಾಧವ್ ಹೆಸರು ಮತ್ತು ಅವನ ಹಳೆಯ ಫೋನ್ ನಂಬರ್ ಕಂಡು ಬಂದಿದೆ. ಬೆದರಿಕೆ ಪತ್ರ ಪ್ರಕರಣವನ್ನು ಗೌರಿ ಲಂಕೇಶ್ ಹತ್ಯೆ ಆಯಾಮದಲ್ಲಿ ತನಿಖೆ ಮಾಡಿದಾಗ ಪ್ರಕರಣದ ಗಂಭೀರ ಸ್ವರೂಪ ಬಯಲಾಗಿದೆ. ಶಿವಾಜಿ ರಾವ್, ಸುಜಿತ್ ಕುಮಾರ್ ನನ್ನು ಗುರುತಿಸಿದ್ದು, ಆತನನ್ನು ಮಂಜುನಾಥ್ ಎಂಬ ಹೆಸರಿನಿಂದ ತಿಳಿದಿದ್ದೇನೆ, ಹಲವು ಬಾರಿ ಮಂಜುನಾಥ್ ನನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಬೆದರಿಕೆ ಪತ್ರದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ಅಪರಾಧ ವಿಭಾಗ (ccb)ತನಿಖೆಯಲ್ಲಿ ತಿಳಿದು ಬಂದಿದೆ.
ಸುಜಿತ್ ಕುಮಾರ್ ತಯಾರಿಸುತ್ತಿದ್ದ ಸಂಭಾವ್ಯ ಗ್ಯಾಂಗ್ ಪಟ್ಟಿಯಲ್ಲಿ ಶಿವಾಜಿ ರಾವ್ ಜಾಧವ್ ಇದ್ದ. ಆದರೆ ಕೊಲೆಗಳ ಬಗ್ಗೆ ಜಾಧವ್ ಗೆ ಮಾಹಿತಿ ಇರಲಿಲ್ಲ. 2018ರಲ್ಲಿ ಒಂದು ವೇಳೆ ಸುಜಿತ್ ಬಂಧನವಾಗದಿದ್ದರೆ ಆತ ಜಾಧವ್ ನನ್ನು ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುವ ಸಾಧ್ಯತೆಯಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
8ನೇ ತರಗತಿಗೆ ಶಾಲೆ ಬಿಟ್ಟ ಶಿವಾಜಿ ರಾವ್ ಜಾಧವ್ ದಾವಣಗೆರೆಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಯಾಗಿದ್ದು, ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ. ಹಿಂದುತ್ವ ಸಿದ್ಧಾಂತದ ಪುಸ್ತಕಗಳ ಹೆಚ್ಚಾಗಿ ಓದುತ್ತಿದ್ದ. ಹತ್ತಿರದ ಗ್ರಂಥಾಲಯಗಳಲ್ಲಿ ಪತ್ರಿಕೆಗಳನ್ನು ಓದುತ್ತಿದ್ದ. ಹಿಂದುತ್ವದ ಕಟು ಟೀಕಾಕಾರರಿಗೆ ಪತ್ರ ಬರೆದು ಬೆದರಿಕೆ ಹಾಕಲು ಪ್ರಾರಂಭಿಸಿದ. ಶಿವಾಜಿ ರಾವ್ ಬಂಧನಕ್ಕೂ ಮುಂಚೆ ಆತ ಕುಂ. ವೀರಭದ್ರಪ್ಪ, ಬಿ.ಟಿ. ಲಲಿತಾ ನಾಯಕ್, ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಬಿ.ಎಲ್. ವೇಣು, ನಿಜಗುಣಾನಂದ ಸ್ವಾಮಿ ಅವರಿಗೆ ಬೆದರಿಕೆ ಹಾಕುವ ಪತ್ರ ಬರೆದು ರವಾನಿಸಿದ್ದ.
ಗುಟ್ಟು ಬಿಚ್ಚಿದ ಡೈರಿ ಪುಸ್ತಕ
ಕಲ್ಬುರ್ಗಿ ಮತ್ತು ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಮೋಲ್ ಕಾಳೆ, ಸುಜಿತ್ ಕುಮಾರ್ ಮತ್ತು ಮನೋಹರ್ ಎಡವೆ ಅವರಿಂದ ಡೈರಿಯನ್ನು ಎಸ್ ಐ ಟಿ ವಶಪಡಿಸಿಕೊಂಡಿದೆ. ಆ ಡೈರಿಯಲ್ಲಿ ಗ್ಯಾಂಗ್ ನ ಹಿಟ್ ಲಿಸ್ಟ್ ಆಗಿರುವ ಹಲವರ ಹೆಸರುಗಳು, ಕೋಡ್ ಬಳಸಿ ಬರೆದಿರುವ ಹೆಸರುಗಳು ಮತ್ತು ಫೋನ್ ಸಂಖ್ಯೆಗಳಿವೆ ಎನ್ನಲಾಗಿದೆ.
ಈ ಡೈರಿಗಳ ಸುಳಿವು ಆಧರಿಸಿ ಗೌರಿ ಲಂಕೇಶ್ ಅವರನ್ನು ಗುರಿಯಾಗಿಸಿಕೊಂಡ ಆರೋಪಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಯಿತು. ಈ ಡೈರಿಗಳಲ್ಲಿ ನಮೂದಿಸಿರುವವರೆಲ್ಲ ಈ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಹೆಚ್ಚಿನ ಹೆಸರುಗಳು "ನೇಮಕಾತಿ" ಯ ವಿವಿಧ ಹಂತಗಳಾಗಿರಬಹುದು ಎಂದು ಅಂದಾಜಿಸಿದ ಎಸ್ಐಟಿ, ಡೈರಿಯಲ್ಲಿರುವ ಹೆಸರುಗಳ ಪಟ್ಟಿಯನ್ನು ತಯಾರಿದೆ. ಅವುಗಳನ್ನು ರಾಜ್ಯ ಮತ್ತು ಕೇಂದ್ರದ ತನಿಖಾ ಏಜೆನ್ಸಿಗಳಿಗೆ ರವಾನಿಸಿದೆ
ನಾಲ್ವರು ಕಾರ್ಯಕರ್ತರನ್ನು ಹತ್ಯೆಗೈದ ಗ್ಯಾಂಗಿನ ನೇತೃತ್ವವನ್ನು 2016 ರಲ್ಲಿ ಮೊದಲು ವಹಿಸಿದ್ದು, ನರೇಂದ್ರ ದಾಭೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟ ವೀರೇಂದ್ರ ತಾವ್ಡೆ. ನಂತರ ಅಮೋಲ್ ಕಾಳೆ ಗ್ಯಾಂಗ್ ಅನ್ನು ಮುನ್ನಡೆಸಿದ್ದ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.