ಅದಾನಿಯ ವಿದೇಶಿ ಫಂಡ್ ಗಳಲ್ಲಿ ಸೆಬಿ ಮುಖ್ಯಸ್ಥೆ ಹೂಡಿಕೆ ಕುರಿತ ಹಿಂಡೆನ್ ಬರ್ಗ್ ವರದಿಗೆ ವಿಪಕ್ಷಗಳ ಪ್ರತಿಕ್ರಿಯೆ ಏನು?

Update: 2024-08-11 10:37 GMT

ಮಾಧಬಿ ಪುರಿ ಬುಚ್ - ಗೌತಮ್ ಅದಾನಿ‌ 

ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಅದಾನಿ ಸಮೂಹದ ಸಾಗರೋತ್ತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆಯು ಆರೋಪಿಸಿರುವ ಬೆನ್ನಿಗೇ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿಯೆದ್ದಿದೆ.

ಈ ಆರೋಪಗಳ ಕುರಿತು ವಿರೋಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ವ್ಯಾಪಕ ದಾಳಿ ಪ್ರಾರಂಭಿಸಿವೆ. ಅದಾನಿ ಸಮೂಹದ ತನಿಖೆಯಲ್ಲಿ ಕಂಡು ಬಂದಿರುವ ಎಲ್ಲ ಹಿತಾಸಕ್ತಿ ಸಂಘರ್ಷಗಳನ್ನು ತೊಡೆದು ಹಾಕಿ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಅದಾನಿ ಸಮೂಹದ ಭಾರಿ ಹಗರಣವನ್ನು ತನಿಖೆಗೊಳಪಡಿಸಲು ಸೆಬಿಯ ಹಿಂಜರಿಕೆಯನ್ನು ಗುರುತಿಸುವಲ್ಲಿ ದೀರ್ಘಕಾಲದ ನಂತರವಾದರೂ ಸಾಧ್ಯವಾಗಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯೂ ಇದನ್ನು ಗುರುತಿಸಿತ್ತು ಎಂದು ಹೇಳಿದ್ದಾರೆ.

ವಿದೇಶಿ ನಿಧಿಗಳ ಮಾಲಕತ್ವದ ಕೊನೆಯ ಫಲಾನುಭವಿ(ನೈಜ)ಯ ವರದಿ ಮಾಡಿಕೊಳ್ಳುವ ಅವಶ್ಯಕತೆಯನ್ನು 2018ರಲ್ಲಿ ಸಡಿಲಗೊಳಿಸಿದ್ದ ಸೆಬಿ, 2019ರಲ್ಲಿ ಸಂಪೂರ್ಣವಾಗಿ ಅಳಿಸಿ ಹಾಕಿತ್ತು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಇದಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಹುವಾ ಮೊಯಿತ್ರಾ, ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಪ್ರಿಯಾಂಕಾ ಚತುರ್ವೇದಿ ಮತ್ತಿತರರೂ ಕೂಡಾ ಹಿಂಡೆನ್ ವರ್ಗ್ ವರದಿಯಲ್ಲಿನ ಆರೋಪದ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ, ಹಿಂಡೆನ್ ಬರ್ಗ್ ವರದಿಯನ್ನು ಅಲ್ಲಗಳೆದಿರುವ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧಾವಲ್ ಬುಚ್, ಇದೊಂದು ಚಾರಿತ್ರ್ಯ ಹರಣದ ಪ್ರಯತ್ನ ಎಂದು ಪ್ರತ್ಯಾರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News