ಪೋಲೀಸ್ ರಕ್ಷಣೆ ಹಿಂಪಡೆದ ಸರಕಾರ: ಭಯದಲ್ಲಿಯೇ ಬದುಕುತ್ತಿರುವ ಗುಜರಾತ್ ಗಲಭೆ ಸಾಕ್ಷಿಗಳು; ವರದಿ

Update: 2024-01-22 13:30 GMT

Photo credit: thewire.in

ಅಹ್ಮದಾಬಾದ್: 2002ರ ಗುಜರಾತ್ ಗಲಭೆ ಪ್ರಕರಣಗಳ ಸಾಕ್ಷಿಗಳು ಭಯದಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ, ಏಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದು ತಿಂಗಳ ಮೊದಲು ಅವರಿಗೆ ನೀಡಿದ್ದ ಪೋಲೀಸ್ ರಕ್ಷಣೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು thewire.in ವರದಿ ಮಾಡಿದೆ.

‘22 ವರ್ಷಗಳ ಕಳೆದಿವೆ,ಆದರೂ ಈಗಲೂ ಹಿಂದೂ ಬಾಹುಳ್ಯದ ಪ್ರದೇಶಗಳಿಗೆ ಹೋಗಲು ನಾನು ಹೆದರುತ್ತಿದ್ದೇನೆ. ಅಲ್ಲಿ ವಾಸವಿರುವುದನ್ನು ನಾನು ಯೋಚಿಸಲೂ ಸಾಧ್ಯವಿಲ್ಲ’ ಎನ್ನುತ್ತಾರೆ ಗುಜರಾತ್ ಗಲಭೆಗಳಲ್ಲಿ ಬದುಕುಳಿದಿರುವ ಸೈಯದ್ ನೂರ್ ಬಾನು.

ಬಾನು ಆಗ ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ವಾಸವಾಗಿದ್ದ ಅಹ್ಮದಾಬಾದ್‌ನ ಹೊರವಲಯದ ನರೋಡಾ ಪಾಟಿಯಾದ ನಿವಾಸಿಯಾಗಿದ್ದರು. 2002,ಫೆ.27ರಂದು ಗೋಧ್ರಾದಲ್ಲಿ ರೈಲು ದಹನದ ಮರುದಿನ ನರೋಡಾ ಪಾಟಿಯಾ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. 96 ಮುಸ್ಲಿಮರನ್ನು ಕೊಲ್ಲಲಾಗಿತ್ತು. ಅಂದು ಅಲ್ಲಿ ನಡೆದಿದ್ದ ನರಮೇಧದ ಪ್ರತ್ಯಕ್ಷದರ್ಶಿಯಾಗಿದ್ದ ಬಾನು ಪ್ರದೇಶದಲ್ಲಿ ಮುಸ್ಲಿಮರನ್ನು ಕೊಂದು,ಅತ್ಯಾಚಾರವೆಸಗಿದ್ದ ಕನಿಷ್ಠ ನಾಲ್ವರು ದಂಗೆಕೋರರನ್ನು ಗುರುತಿಸಿದ್ದರು.

2023,ಡಿಸೆಂಬರ್‌ನಲ್ಲಿ ಬಾನು ಅವರಂತಹ ಹಲವಾರು ಸಾಕ್ಷಿಗಳಿಗೆ ನೀಡಿದ್ದ ಪೋಲಿಸ್ ರಕ್ಷಣೆಯನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಇಂತಹ ಹಲವಾರು ಸಾಕ್ಷಿಗಳು 2009ರಿಂದಲೂ ರಕ್ಷಿತ ವ್ಯಕ್ತಿಗಳ ವರ್ಗದಲ್ಲಿದ್ದರು.

ಗುಜರಾತ್ ಸರಕಾರವು ಈಗ ಹಲವಾರು ಸಾಕ್ಷಿಗಳು,ಸಂತ್ರಸ್ತರ ಪರ ವಕೀಲರಿಗೆ ನೀಡಿದ್ದ ರಕ್ಷಣೆಯನ್ನು ಹಿಂದೆಗೆದುಕೊಂಡಿದೆ. ನರೋಡಾ ಪಾಟಿಯಾ ಪ್ರಕರಣದಲ್ಲಿ 32 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದ್ದ ಮಾಜಿ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಗ್ನಿಕ್ ಅವರೂ ಈಗ ಪೋಲಿಸ್ ರಕ್ಷಣೆಯಿಂದ ವಂಚಿತರಾಗಿದ್ದಾರೆ.

2009ರಲ್ಲಿ ತಾನು ನಿರ್ವಹಿಸುತ್ತಿದ್ದ ಒಂಭತ್ತು ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು ವಿಶೇಷ ತನಿಖಾ ತಂಡ( ಸಿಟ್)ವು ವಿಶೇಷ ಸಾಕ್ಷಿಗಳ ಸಂರಕ್ಷಣಾ ಕೋಶವನ್ನು ರಚಿಸಬೇಕು ಎಂದು ಶಿಫಾರಸು ಮಾಡಿತ್ತು.

ಸಾಕ್ಷಿಗಳಲ್ಲೋರ್ವರಾಗಿರುವ ಮುಹಮ್ಮದ್ ಅಬ್ದುಲ್ ಹಮೀದ್ ಶೇಖ್ ಅಹ್ಮದಾಬಾದ್‌ನ ಸಿಟಿಜನ್ ನಗರದ ನಿವಾಸಿಯಾಗಿದ್ದಾರೆ. ಇಲ್ಲಿ 50ಕ್ಕೂ ಅಧಿಕ ಮುಸ್ಲಿಮ್ ಕುಟುಂಬಗಳು ವಾಸಿಸುತ್ತಿವೆ. 2002ರ ಗಲಭೆಗಳ ಬಳಿಕ ನಿರ್ವಸಿತಗೊಂಡಿದ್ದ ಈ ಕುಟುಂಬಗಳು ಕಳೆದ 22 ವರ್ಷಗಳಿಂದಲೂ ಇಲ್ಲಿ ಬದುಕು ಕಟ್ಟಿಕೊಂಡಿವೆ.

ಸಾಕ್ಷಿಗಳ ಭದ್ರತೆಯನ್ನು ಹಿಂದೆಗೆದುಕೊಂಡಿರುವುದು ಯೋಜಿತವಾಗಿದೆ. ತನ್ಮೂಲಕ ಮುಸ್ಲಿಮರ ವಿರುದ್ಧ ಅಪರಾಧಗಳಿಗೆ ಸಾಕ್ಷಿಗಳಾಗಿರುವವರನ್ನು ಅವರೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳಿಗೆ ಒಡ್ಡಲಾಗಿದೆ ಎಂದು ಹೇಳಿದ ಶೇಖ್, ‘ನಮ್ಮ ಮಾತು ಕೇಳುವವರು ಯಾರಿದ್ದಾರೆ? ನಮ್ಮ ಭದ್ರತೆಯನ್ನು ಮರುಸ್ಥಾಪಿಸುವಂತೆ ನಾವು ಅವರನ್ನು ಒತ್ತಾಯಿಸಿದರೆ ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಾನು ಭಾವಿಸಿಲ್ಲ’ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ತನ್ನ ಸ್ವಂತ ಅನುಭವವನ್ನು ನೆನಪಿಸಿಕೊಂಡ ಬಾನು,‘ಅದೇ ವಾತಾವರಣವು ಈಗಲೂ ನಿರ್ಮಾಣಗೊಂಡಿದೆ. ಅವೇ ಮೆರವಣಿಗೆಗಳು,ಅವೇ ಭಗವಾ ಧ್ವಜಗಳು;ನಮಗೆ ಒಳಗೊಳಗೇ ಭಯವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಅವರು ಪ್ರತ್ಯಕ್ಷದರ್ಶಿಯಾಗಿರುವ ನರೋಡಾ ಪಾಟಿಯಾ ಪ್ರಕರಣವು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿದೆ.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮತ್ತು ತಮ್ಮ ಭದ್ರತೆಯನ್ನು ಹಿಂದೆಗೆದುಕೊಂಡಿರುವುದು ತಮ್ಮನ್ನು ಮತ್ತೆ ಭಯದಲ್ಲಿ ತಳ್ಳಿದೆ, ಏಕೆಂದರೆ ಇದೇ ರಾಮ ಮಂದಿರಕ್ಕಾಗಿ ಹೋರಾಟವು ಗುಜರಾತ್ ಗಲಭೆಗೆ ನಾಂದಿ ಹಾಡಿತ್ತು ಮತ್ತು ಬೃಹತ್‌ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಶೇಖ್, ಬಾನು ಮತ್ತು ಇತರ ಸಾಕ್ಷಿಗಳು ಕಳವಳ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News