ಗುರುಗ್ರಾಮ: ಮುಸ್ಲಿಮರು ಜಾಗ ಖಾಲಿ ಮಾಡುವಂತೆ ಬೆದರಿಕೆ ಪೋಸ್ಟರ್; ಪ್ರಕರಣ ದಾಖಲು
ಗುರುಗ್ರಾಮ್: ಗುರುಗ್ರಾಮದ ಕೊಳೆಗೇರಿ ಪ್ರದೇಶದಲ್ಲಿನ ಕೆಲವು ಮಳಿಗೆಗಳ ಗೋಡೆಯ ಮೇಲೆ ಸೋಮವಾರದ ಹೊತ್ತಿಗೆ ಮನೆ ತೊರೆಯಬೇಕು ಎಂದು ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ಭಿತ್ತಿಚಿತ್ರಗಳು ಕಂಡು ಬಂದಿದ್ದು, ಈ ಎಚ್ಚರಿಕೆಯನ್ನು ಉಲ್ಲಂಘಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ವರದಿಯಾಗಿದೆ.
ಜುಲೈ ತಿಂಗಳಲ್ಲಿ ನೂಹ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಜ್ ಮಂಡಲ್ ಶೋಭಾ ಯಾತ್ರೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದ್ದರಿಂದ ಸ್ಥಗಿತಗೊಂಡಿದ್ದ ಶೋಭಾ ಯಾತ್ರೆಯನ್ನು ಸೋಮವಾರ ಮರುಚಾಲನೆಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಬೆನ್ನಿಗೇ ಈ ಬೆದರಿಕೆಯ ಭಿತ್ತಿ ಚಿತ್ರಗಳು ಸೆಕ್ಟರ್ 69 ಸ್ಲಂನಲ್ಲಿ ಪ್ರತ್ಯಕ್ಷವಾಗಿವೆ.
ಈ ಕುರಿತು ದೂರು ಸಲ್ಲಿಸಿರುವ ಮೋಜೆದ್, ರವಿವಾರ ಬೆಳಗ್ಗೆ ಈ ಭಿತ್ತಿಚಿತ್ರವು ನನ್ನ ಟೀ ಅಂಗಡಿಯ ಗೋಡೆ ಮೇಲೆ ನೇತಾಡುತ್ತಿರುವುದನ್ನು ಕಂಡೆ ಎಂದು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಹೆಸರನ್ನು ಹೊಂದಿದ್ದ ಆ ಭಿತ್ತಿ ಚಿತ್ರದಲ್ಲಿ ಎಲ್ಲ ಮುಸ್ಲಿಮರೂ ಸೋಮವಾರದೊಳಗೆ ತಮ್ಮ ನಿವಾಸಗಳನ್ನು ತೊರೆಯಬೇಕು ಇಲ್ಲವಾದರೆ ತಮ್ಮ ಸಾವಿಗೆ ಅವರೇ ಹೊಣೆ ಹೊರಬೇಕು ಎಂದು ಬೆದರಿಕೆ ಒಡ್ಡಲಾಗಿತ್ತು ಎಂದು ಹೇಳಿದ್ದಾರೆ.
ತನಗೆ ಬೆದರಿಕೆ ಒಡ್ಡಲು ಹಾಗೂ ತಾನಿರುವ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಆಸಿಫ್ ಎಂಬಾತ ಆ ಪೋಸ್ಟರ್ ಅಂಟಿಸಿರುವ ಸಾಧ್ಯತೆ ಇದೆ ಎಂದು ಮೋಜೆದ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಈ ನಡುವೆ, ಭಿತ್ತಿ ಚಿತ್ರದಲ್ಲಿ ತನ್ನ ಯಾವುದೇ ಪಾತ್ರವನ್ನು ನಿರಾಕರಿಸಿರುವ ವಿಶ್ವ ಹಿಂದೂ ಪರಿಷತ್, ಆ ನಕಲಿ ಅಭಿಯಾನದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಮೋಜೆದ್ ದೂರನ್ನು ಆಧರಿಸಿ ರವಿವಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿಭಂಗಗೊಳಿಸಲು ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 295ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಲು ಉದ್ದೇಶಪೂರ್ವಕ ಹಾಗೂ ದುರದ್ದೇಶಪೂರ್ವಕ ಕೃತ್ಯ) 188 (ಸಾರ್ವಜನಿಕ ಸೇವಕ ಅಧಿಕೃತವಾಗಿ ಹೊರಡಿಸಿರುವ ಆದೇಶಕ್ಕೆ ಅವಿಧೇಯತೆ ಪ್ರದರ್ಶನ) ಹಾಗೂ 294 (ನಿಂದನೆ) ಅಡಿ ಪ್ರಾಥಮಿಕ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತನಿಖಾಧಿಕಾರಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಚರಣ್ ಸಿಂಗ್, “ನಾವು ಶಂಕಿತ ಆಸಿಫ್ ಪಾತ್ರದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಆತನನ್ನು ಶೀಘ್ರವೇ ಬಂಧಿಸಲಾಗುವುದು” ಎಂದು ಹೇಳಿದ್ದಾರೆ