ಕಾಂಗ್ರೆಸ್ ಆಳ್ವಿಕೆಯಲ್ಲಿ ‘‘ಹನುಮಾನ್ ಚಾಲೀಸಾ ಅಪರಾಧ’’ : ಪ್ರಧಾನಿ ಮೋದಿ

Update: 2024-04-23 15:46 GMT

 ನರೇಂದ್ರ ಮೋದಿ | PC : PTI 

ಜೈಪುರ : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ್ತೆ ಚುನಾವಣೆಯಲ್ಲಿ ಧರ್ಮವನ್ನು ಬೆರೆಸಿ, ವಿಭಜನೆಯ ಮಾತುಗಳನ್ನು ಆಡಿ ಮತಗಳನ್ನು ಕೋರಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ‘‘ಹನುಮಾನ್ ಚಾಲಿಸವನ್ನು ಕೇಳುವುದು ಅಪರಾಧವಾಗುತ್ತದೆ’’ ಎಂದು ಹೇಳಿಕೊಂಡಿದ್ದಾರೆ.

ರಾಜಸ್ಥಾನದ ಟೊಂಕ್-ಸವಾಯಿ ಮಾದೊಪುರ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದೆ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಾಜ್ಯದಲ್ಲಿ ರಾಮನವಮಿ ಆಚರಣೆಯನ್ನು ನಿಷೇಧಿಸಿತ್ತು ಎಂದು ಹೇಳಿಕೊಂಡರು.

‘‘ಕಾಂಗ್ರೆಸ್ ಆಳ್ವಿಕೆಯಲ್ಲಿ, ಹನುಮಾನ್ ಚಾಲಿಸವನ್ನು ಕೇಳುವುದೂ ಅಪರಾಧವಾಗುತ್ತದೆ. ಆ ಪಕ್ಷದ ಈ ನೀತಿಯಿಂದಾಗಿ ರಾಜಸ್ಥಾನ ಬಳಲಿದೆ. ಈ ಬಾರಿ ಮೊದಲ ಬಾರಿಗೆ, ರಾಜಸ್ಥಾನದಲ್ಲಿ ರಾಮನವಮಿ ಸಂದರ್ಭದಲ್ಲಿ ಶೋಭಾ ಯಾತ್ರೆಯನ್ನು ಏರ್ಪಡಿಸಲಾಗಿದೆ. ರಾಜಸ್ಥಾನದಂಥ ರಾಜ್ಯದಲ್ಲಿ ಜನರು ರಾಮ್-ರಾಮ್ ಎಂದು ಜಪಿಸುತ್ತಾರೆ, ಆದರೆ ಕಾಂಗ್ರೆಸ್ ರಾಮ ನವಮಿಯನ್ನೇ ನಿಷೇಧಿಸಿದೆ’’ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ, ಹನುಮಾನ್ ಚಾಲಿಸವನ್ನು ಹಾಕಿರುವುದಕ್ಕಾಗಿ ಓರ್ವ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರಧಾನಿ ಹೇಳಿಕೊಂಡರು.

‘‘ಇಂದು ಹನುಮಾನ್ ಜಯಂತಿ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಕೆಲವು ದಿನಗಳ ಹಿಂದೆ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ. ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ, ತನ್ನ ಅಂಗಡಿಯಲ್ಲಿ ಕುಳಿತು ಹನುಮಾನ್ ಚಾಲಿಸವನ್ನು ಕೇಳಿರುವುದಕ್ಕಾಗಿ ಅಂಗಡಿ ಮಾಲೀಕನನ್ನು ಗಂಭೀರವಾಗಿ ಥಳಿಸಲಾಗಿತ್ತು’’ ಎಂದು ಮೋದಿ ನುಡಿದರು.

ಎರಡು ದಿನಗಳ ಹಿಂದೆ ಇನ್ನೊಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ, ನಿಮ್ಮ ಸಂಪತ್ತನ್ನು ಕಸಿದುಕೊಂಡು ‘‘ನುಸುಳುಕೋರರಿಗೆ’’ ವಿತರಿಸಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಹೇಳಿಕೊಂಡಿದ್ದರು.

ಇದನ್ನು ಕಾಂಗ್ರೆಸ್ ದ್ವೇಷ ಭಾಷಣ ಎಂಬುದಾಗಿ ಬಣ್ಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News