ಹತ್ರಾಸ್ ಕಾಲ್ತುಳಿತ ಪ್ರಕರಣ: ಆರೋಪ ಪಟ್ಟಿಯಲ್ಲಿ ಭೋಲೆ ಬಾಬಾ ಹೆಸರಿಲ್ಲ!
ಆಗ್ರಾ: ಕಳೆದ ಜುಲೈ 2ರಂದು 121 ಮಂದಿಯ ಸಾವಿಗೆ ಕಾರಣವಾಗಿದ್ದ ಹತ್ರಾಸ್ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 3200 ಪುಟಗಳ ಆರೋಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸ್ವಯಂಘೋಷಿತ ದೇವಮಾನವ ಸೂರಜ್ ಪಾಲ್ ಸಿಂಗ್ ಅಲಿಯಾಸ್ ಭೋಲೆ ಬಾಬಾ ಆಯೋಜಿಸಿದ್ದ ಸಮಾವೇಶದ ವೇಳೆ ಈ ದುರಂತ ಸಂಭವಿಸಿತ್ತು. ಇಬ್ಬರು ಮಹಿಳೆಯರು ಸೇರಿದಂತೆ 11 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಆದರೆ ಭೋಲೇಬಾಬಾ ಹೆಸರು ಆರೋಪಪಟ್ಟಿಯಲ್ಲಿಲ್ಲ.
ಆರೋಪಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳಿಕೆ ನೀಡಿ, "ಆರೋಪಪಟ್ಟಿಯನ್ನು ನ್ಯಾಯಾಲಯ ಪರಿಶೀಲನೆ ನಡೆಸಿದ ಬಳಿಕ ವಿಚಾರಣೆ ಆರಂಭವಾಗಲಿದೆ. ಅಕ್ಟೋಬರ್ 4ರಂದು ಮುಂದಿನ ವಿಚಾರಣೆ ನಡೆಯಲಿದೆ" ಎಂದು ಸ್ಪಷ್ಟಪಡಿಸಿದರು. ಮಂಗಳವಾರ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ಸೇರಿದಂತೆ 10 ಮಂದಿ ಆರೋಪಿಗಳನ್ನು ಅಲೀಗಢ ಜಿಲ್ಲಾ ನ್ಯಾಯಾಲಯದಿಂದ ಹತ್ರಾಸ್ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತರಲಾಯಿತು.
ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 105, 110, 223 ಮತ್ತು 238ರ ಅನ್ವಯ ಜುಲೈ 2ರಂದು ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿ ಮಹಿಳೆಯರಾದ ಮಂಜುದೇವಿ ಮತ್ತು ಮಂಜು ಯಾದವ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಸೆಪ್ಟೆಂಬರ್ ನಲ್ಲಿ ಷರತ್ತುಬದ್ಧ ಜಾಮೀನು ನೀಡಿತ್ತು. ಉಳಿದ ಒಂಬತ್ತು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದಕ್ಕೂ ಮುನ್ನ ವಿಶೇಷ ತನಿಖಾ ತಂಡ ಸಾವುಗಳ ಬಗ್ಗೆ ವರದಿ ಸಲ್ಲಿಸಿತ್ತು. ಇದರ ಆಧಾರದಲ್ಲಿ ಡಿವೈಎಸ್ಪಿ ಸಿಕಂದ್ರಾ ರಾವ್, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್, ತಹಶೀಲ್ದಾರ್ ಸುಶೀಲ್ ಕುಮಾರ್ ಮತ್ತು ಇಬ್ಬರು ಸಬ್ ಇನ್ಸ್ಪೆಕ್ಟರ್ ಗಳಾದ ಮನ್ವೀರ್ ಸಿಂಗ್ ಹಾಗೂ ಬೃಜೇಶ್ ಪಾಂಡೆ ಅವರನ್ನು ನಿರ್ಲಕ್ಷ ಹಾಗೂ ಕರ್ತವ್ಯಚ್ಯುತಿ ಆರೋಪದಲ್ಲಿ ಅಮಾನತು ಮಾಡಲಾಗಿತ್ತು. ಎಸ್ಐಟಿ ತಂಡ ಕೂಡಾ ಭೋಲೇಬಾಬಾ ಅವರ ಪಾತ್ರದ ಬಗ್ಗೆ ಯಾವ ಪ್ರಶ್ನೆಯನ್ನೂ ಎತ್ತಿರಲಿಲ್ಲ.