ಎಸ್ ಬಿ ಐ ಯನ್ನು ಬಿಜೆಪಿಯು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ : ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳ ಮೂಲಕ ನೀಡಲಾಗಿರುವ ದೇಣಿಗೆಯ ಮಾಹಿತಿ ನೀಡಲು ವಿಧಿಸಲಾಗಿರುವ ಗಡುವನ್ನು ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಭಾರತೀಯ ಸ್ಟೇಟ್ ಬ್ಯಾಂಕ್ ಮನವಿ ಮಾಡಿರುವ ಬೆನ್ನಿಗೇ, ಬಿಜೆಪಿಯು ಮಾಹಿತಿಯನ್ನು ಬಚ್ಚಿಡಲು ಬ್ಯಾಂಕನ್ನು ಗುರಾಣಿಯನ್ನಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ. ನ್ಯಾಯಾಲಯವು ವಿಧಿಸಿರುವ ಗಡುವನ್ನು ಮಾರ್ಚ್ 6ರಿಂದ ಜೂನ್ 30ರವರೆಗೆ ವಿಸ್ತರಿಸಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಮನವಿ ಮಾಡಿರುವುದು ಲೋಕಸಭಾ ಚುನಾವಣೆ ಮುಗಿಯುವವರೆಗೆ ಅಸಾಂವಿಧಾನಿಕ ಬಾಂಡ್ ಗಳ ದತ್ತಾಂಶವನ್ನು ಮರೆ ಮಾಚುವ ಪ್ರಯತ್ನ ಎಂದೂ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀರನಾಠೆ, “ಇದು ಅನಿರೀಕ್ಷಿತವಲ್ಲ. ತುಂಬಾ ಆಘಾತಕಾರಿ ಹಾಗೂ ಲಜ್ಜೆಗೆಟ್ಟ ದಾರಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಗಡುವನ್ನು ಜೂನ್ 30ರವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಕೇವಲ ಭಾರತದ ಅತಿ ದೊಡ್ಡ ಸಾಲ ನೀಡಿಕೆ ಸಂಸ್ಥೆ ಮಾತ್ರವಲ್ಲ; ಸಂಪೂರ್ಣವಾಗಿ ಗಣಕೀಕೃತಗೊಂಡಿರುವ ಬ್ಯಾಂಕ್. ಅದು 48 ಕೋಟಿ ಬ್ಯಾಂಕ್ ಖಾತೆಗಳನ್ನು ಕಾರ್ಯಾಚರಿಸುತ್ತಿದ್ದು, 66,000 ಎಟಿಎಂಗಳನ್ನು ಹೊಂದಿದೆ. ದೇಶಾದ್ಯಂತ ಹಾಗೂ ದೇಶದ ಹೊರಗೆ ಸುಮಾರು 23,000 ಶಾಖೆಗಳನ್ನು ಹೊಂದಿದೆ. ಇಂತಹ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಕೇವಲ 22,217 ಚುನಾವಣಾ ಬಾಂಡ್ ಕುರಿತ ದತ್ತಾಂಶ ನೀಡಲು ಐದು ತಿಂಗಳ ಅಗತ್ಯವಿದೆ. ಈ ಮಾಹಿತಿಯನ್ನು ಅದು ಕೇವಲ ಒಂದು ಕ್ಲಿಕ್ ನಲ್ಲಿ ನೀಡಬಹುದಾಗಿದೆ. ಈ ಹೆಸರುಗಳು ಹೊರ ಬರುವ ಬಗ್ಗೆ ಬಿಜೆಪಿಯೇಕೆ ಭೀತಿಗೊಂಡಿದೆ?” ಎಂದು ಪ್ರಶ್ನಿ ಸಿದ್ದಾರೆ.
“2017-2023ರ ನಡುವೆ ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳು ಸುಮಾರು ರೂ. 12,000 ಕೋಟಿ ಮೊತ್ತವನ್ನು ದೇಣಿಗೆಯಾಗಿ ಪಡೆದುಕೊಂಡಿವೆ. ಈ ಪೈಕಿ ಮೂರನೆಯ ಎರಡರಷ್ಟು ಮೊತ್ತ, ಅರ್ಥಾತ್ ರೂ. 6,500 ಕೋಟಿ ಮೊತ್ತದ ದೇಣಿಗೆಯನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಕಾಂಗ್ರೆಸ್ ಕೇವಲ ಶೇ. 9ರಷ್ಟು ಮಾತ್ರ ದೇಣಿಗೆಯನ್ನು ಪಡೆದುಕೊಂಡಿದೆ” ಎಂದು ಶ್ರೀನಾಠೆ ಹೇಳಿದ್ದಾರೆ.
ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಘೋಷಿಸಿ, ಆ ಯೋಜನೆಯನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಚುನಾವಣಾ ಬಾಂಡ್ ದತ್ತಾಂಶವನ್ನು ಮಾರ್ಚ್ 6ರೊಳಗೆ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು