ಹಿಮಾಚಲ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಪಕ್ಷೇತರ ಶಾಸಕರು ರಾಜೀನಾಮೆ
ಶಿಮ್ಲಾ: ಫೆಬ್ರುವರಿ 27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಮೂವರು ಪಕ್ಷೇತರ ಶಾಸಕರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ರಾಜ್ಯ ಸರ್ಕಾರ ನಮ್ಮನ್ನು ಮತ್ತು ನಮ್ಮ ಕುಟುಂಬಗಳನ್ನು ಗುರಿ ಮಾಡಿದ್ದು, ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ" ಎಂದು ಅವರು ಆಪಾದಿಸಿದ್ದಾರೆ.
ನಲಗಢ ಶಾಸಕ ಕೆ.ಎಲ್.ಠಾಕೂರ್, ದೆಹ್ರಾ ಶಾಸಕ ಹೋಶಿಯಾರ್ ಸಿಂಗ್ ಮತ್ತು ಹಮೀರ್ ಪುರ ಶಾಸಕ ಆಶೀಶ್ ಶರ್ಮಾ ಹೆಲಿಕಾಪ್ಟರ್ನಲ್ಲಿ ಶಿಮ್ಲಾಗೆ ಆಗಮಿಸಿ, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾ ಕಾರ್ಯರ್ಶಿ ಯಶ್ ಪಾಲ್ ಶರ್ಮಾ ಅವರಿಗೆ ಸಲ್ಲಿಸಿದರು.
ಶುಕ್ರವಾರ ಮೂವರು ನೀಡಿದ ರಾಜೀನಾಮೆ ಬಳಿಕ, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಒಂಬತ್ತು ಸ್ಥಾನಗಳು ಖಾಲಿ ಉಳಿದಂತಾಗಿವೆ. ಇದಕ್ಕೂ ಮುನ್ನ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಮತ್ತು ಬಜೆಟ್ ಅಧಿವೇಶನದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕಾಗಿ ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಅಡ್ಡ ಮತದಾನ ಮಾಡಿದ ಕಾರಣಕ್ಕಾಗಿ ಅನರ್ಹಗೊಳಿಸಲಾಗಿತ್ತು. ಖಾಲಿ ಇರುವ ಆರು ಸ್ಥಾನಗಳಿಗೆ ಈಗಾಗಲೇ ಉಪ ಚುನಾವಣೆ ಘೋಷಿಸಲಾಗಿದೆ.
ರಾಜೀನಾಮೆ ಬಳಿಕ ಮಾತನಾಡಿದ ಹೋಶಿಯಾರ್ ಸಿಂಗ್, ಆತ್ಮಸಾಕ್ಷಿಗೆ ಅನುಗುಣವಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಶಾಸಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಇದು ಪ್ರಜಾಸತ್ತಾತ್ಮಕ ನಿಯಮಗಳಿಗೆ ವಿರುದ್ಧವಾದದ್ದು ಎಂದು ಅವರು ಆಪಾದಿಸಿದ್ದಾರೆ. ಆಶೀಶ್ ಶರ್ಮಾ ಮಾತನಾಡಿ, ರಾಜ್ಯದಲ್ಲಿ ಅಭದ್ರತೆಯ ವಾತಾವರಣ ಇದ್ದು, ಕೀಳುಮಟ್ಟದ ರಾಜಕೀಯ ನಡೆಯುತ್ತಿದೆ. ಕ್ಷೇತ್ರ ಹಾಗೂ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಒತ್ತಡ ಇಲ್ಲದೇ ರಾಜೀನಾಮೆ ನೀಡಿದ್ದಾಗಿ ಸ್ಪಷ್ಟಪಡಿಸಿದರು. ಬಿಜೆಪಿ ಟಿಕೆಟ್ನಲ್ಲಿ ಮತ್ತೆ ಸ್ಪರ್ಧೆ ಮಾಡುವುದಾಗಿ ಅವರು ಬಹಿರಂಗಪಡಿಸಿದರು.