ಹುಸಿ ಬಾಂಬ್ ಕರೆಗಳನ್ನು ಗಂಭೀರ ಅಪರಾಧವನ್ನಾಗಿ ಮಾಡಲಾಗುವುದು : ನಾಗರಿಕ ವಿಮಾನಯಾನ ಸಚಿವರ ಪ್ರತಿಕ್ರಿಯೆ
ಹೊಸದಿಲ್ಲಿ: ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಸಂಜ್ಞೇಯ(ಗಂಭೀರ) ಅಪರಾಧವನ್ನಾಗಿಸಲಾಗುವುದು ಎಂದು ನಾಗರಿಕ ವಾಯುಯಾನ ಸಚಿವ ರಾಮಮೋಹನ ನಾಯ್ಡು ಅವರು ಸೋಮವಾರ ಇಲ್ಲಿ ತಿಳಿಸಿದರು. ಕಳೆದ ಕೆಲವು ದಿನಗಳಲ್ಲಿ ಹಲವರು ವಿಮಾನಯಾನ ಸಂಸ್ಥೆಗಳು ಇಂತಹ ಕರೆಗಳನ್ನು ಸ್ವೀಕರಿಸಿದ್ದು, ದೇಶಾದ್ಯಂತ ವಿಮಾನಯಾನಗಳು ವ್ಯತ್ಯಯಗೊಂಡಿದ್ದ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಹೊರಬಿದ್ದಿದೆ.
ಇದೊಂದು ಸೂಕ್ಷ್ಮ ಪರಿಸ್ಥಿತಿ ಎಂದು ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದ ನಾಯ್ಡು,ಇಂತಹ ಹುಸಿ ಕರೆಗಳನ್ನು ಮಾಡುವವರನ್ನು ವಿಮಾನಯಾನ ಸಂಸ್ಥೆಗಳ ‘ನೋ-ಫ್ಲೈ’ ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು.
‘‘ಈ ವಿಷಯದ ಕುರಿತು ನಾವು ಹಲವಾರು ಸಭೆಗಳನ್ನು ನಡೆಸಿದ್ದು,ನಿಯಮಗಳು ಮತ್ತು ನಿಬಂಧನೆಗಳಿಗೆ ತಿದ್ದುಪಡಿಗಳು ಅಗತ್ಯವಾಗಿವೆ ಎಂದು ತೀರ್ಮಾನಿಸಿದ್ದೇವೆ. ಈ ಬದಲಾವಣೆಗಳು ಈ ಪಿಡುಗಿನ ವಿರುದ್ಧ ನಮ್ಮ ಪ್ರಸ್ತುತ ಹೋರಾಟವನ್ನು ಬಲಗೊಳಿಸಲಿವೆ. ಒಮ್ಮೆ ಅಪರಾಧಿಗಳನ್ನು ಬಂಧಿಸಿದರೆ ಅವರನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲಾಗುತ್ತದೆ ’’ ಎಂದು ಅವರು ಹೇಳಿದರು.
ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಇನ್ನಷ್ಟು ಬಲಗೊಳಿಸಲು ವಾಯುಯಾನ ಸಚಿವಾಲಯವು ಇತರ ಸಚಿವಾಲಯಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ ನಾಯ್ಡು,ವಿಮಾನಗಳ ಭದ್ರತಾ ನಿಯಮಗಳಲ್ಲಿಯೂ ಬದಲಾವಣೆಗಳು ಅಗತ್ಯವಾಗಿವೆ ಎಂದರು.