ಹಿಂದಿನ ಸರ್ಕಾರಗಳೇ ಅಧಿಕಾರದಲ್ಲಿದ್ದಿದ್ದರೆ ಹಾಲಿನ ಬೆಲೆ ಲೀಟರ್ ಗೆ ರೂ. 300 ಆಗಿರುತ್ತಿತ್ತು: ಪ್ರಧಾನಿ ಮೋದಿ

Update: 2023-07-30 18:13 GMT

ರಾಜ್‍ಕೋಟ್ (ಗುಜರಾತ್): ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಿಂದಿನ ಸರ್ಕಾರಗಳೇ ಅಧಿಕಾರದಲ್ಲಿದ್ದಿದ್ದರೆ ಹಣದುಬ್ಬರ ಗಗನಮುಖಿಯಾಗಿರುತ್ತಿತ್ತು ಎಂದು ಆರೋಪಿಸಿದ್ದಾರೆ. ರಾಜ್‍ಕೋಟ್‍ನ ರೇಸ್‍ಕೋರ್ಸ್ ಕ್ರೀಡಾಂಗಣದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕೋವಿಡ್ ಸಾಂಕ್ರಾಮಿಕ ಹಾಗೂ ಉಕ್ರೇನ್ ಯುದ್ಧದ ಹೊರತಾಗಿಯೂ ಬಿಜೆಪಿ ಸರ್ಕಾರ ಹಣದುಬ್ಬರದ ಏರಿಕೆಯನ್ನು ತಡೆಗಟ್ಟಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

ಈ ಹಿಂದಿನ ಸರ್ಕಾರಗಳೇ ಅಧಿಕಾರದಲ್ಲಿದ್ದಿದ್ದರೆ ಹಾಲಿನ ಬೆಲೆ ಲೀಟರ್ ಗೆ ರೂ. 300 ಹಾಗೂ ಬೇಳೆಕಾಳುಗಳ ಬೆಲೆ ಕೆಜಿಗೆ ರೂ. 500 ಆಗಿರುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಸರ್ಕಾರದ ಸಾಧನೆಗಳನ್ನು ಒತ್ತಿ ಹೇಳಿದ ಅವರು, ರೇರಾ ಕಾಯ್ದೆಯು ಲಕ್ಷಾಂತರ ಮಧ್ಯಮ ವರ್ಗದವರನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಜನರು ಒಂದು ಜಿಬಿ ಡೇಟಾಕ್ಕೆ ಸುಮಾರು ರೂ. 300 ಪಾವತಿಸುತ್ತಿದ್ದರು. ಆದರೀಗ 20 ಜಿಬಿ ಡೇಟಾಕ್ಕೆ ಕೇವಲ ರೂ. 300-400 ಪಾವತಿಸುತ್ತಿದ್ದಾರೆ. ಆ ಮೂಲಕ ಜನರು ತಮ್ಮ ಡೇಟಾ ಶುಲ್ಕದಲ್ಲಿ ಸುಮಾರು ರೂ. 5000 ಉಳಿಸಲು ಸಾಧ್ಯವಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ನನ್ನ ಸರ್ಕಾರವು ಮಧ್ಯಮ ವರ್ಗ ಹೆಚ್ಚು ಉಳಿತಾಯ ಮಾಡಲು ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮಾತಿಗೆ ನಿದರ್ಶನವಾಗಿ, “ಒಂಬತ್ತು ವರ್ಷಗಳ ಹಿಂದೆ ರೂ. 2 ಲಕ್ಷ ಆದಾಯದ ಮೇಲೆ ಆದಾಯ ತೆರಿಗೆಯನ್ನು ಹೇರಲಾಗುತ್ತಿತ್ತು. ಆದರೀಗ ರೂ. 7 ಲಕ್ಷದವರೆಗೂ ಯಾವುದೇ ಆದಾಯ ತೆರಿಗೆಯಿಲ್ಲ” ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷಗಳ INDIA ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮುಖಗಳು, ಪಾಪಗಳು, ಅಭ್ಯಾಸಗಳೆಲ್ಲವೂ ಒಂದೇ ಆಗಿದ್ದರೂ ಗುಂಪಿನ ಹೆಸರನ್ನು ಮಾತ್ರ ಬದಲಿಸಲಾಗಿದೆ” ಎಂದು ಟೀಕಿಸಿದ್ದಾರೆ.

“ಈ ದೇಶ ಮುಂದೆ ಸಾಗುತ್ತಿರುವಾಗ ಅದನ್ನು ಕೆಲವರು ಸಹಿಸುತ್ತಿಲ್ಲ.. ಅವರು ಜನರ ಕನಸು ನನಸಾಗುತ್ತಿರುವ ವಾಸ್ತವದಿಂದ ಭ್ರಮನಿರಸನಗೊಂಡಿದ್ದಾರೆ. ಹೀಗಾಗಿಯೇ ಭ್ರಷ್ಟಾಚಾರಿಗಳು ಹಾಗೂ ರಾಜವಂಶಗಳು ತಮ್ಮ ಗುಂಪಿನ ಹೆಸರನ್ನು ಬದಲಿಸಿಕೊಂಡಿವೆ” ಎಂದು ಮೋದಿ ಹರಿಹಾಯ್ದಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಗುಜರಾತ್ ಜನರ ಪ್ರಯತ್ನದಿಂದಾಗಿ ಗುಜರಾತ್ ರಾಜ್ಯವಿಂದು ಕಿರು ಜಪಾನ್ ಆಗಿದೆ” ಎಂದು ಹೇಳಿದ್ದಾರೆ.

“ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಕಿರು ಜಪಾನ್ ಆಗಿ ಬದಲಾಗುತ್ತಿದೆ ಎಂದು ಹೇಳಿದ್ದೆ. ಆದರೆ, ಕೆಲವು ವ್ಯಕ್ತಿಗಳು ನನ್ನನ್ನು ಹಾಸ್ಯ ಮಾಡಿದ್ದರು. ಆದರಿಂದು ನೀವದನ್ನು ಪೂರ್ಣಗೊಳಿಸಿದ್ದೀರಿ” ಎಂದು ಅವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News