ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

Update: 2023-06-27 18:15 GMT

ಹೊಸದಿಲ್ಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳ್ಳುವ ಅಗತ್ಯವಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಲವಾಗಿ ಪ್ರತಿಪಾದಿಸಿದ್ದಾರೆ.

ಸಂವಿಧಾನದಲ್ಲಿಯೂ ಸಮಾನನಾಗರಿಕ ಸಂಹಿತೆಯ ಪರಿಕಲ್ಪನೆಯಿದೆ ಮತ್ತು ಸುಪ್ರೀಂಕೋರ್ಟ್ ಕೂಡಾ ಅದನ್ನು ಜಾರಿಗೊಳಿಸಬೇಕೆಂದು ಕೇಳಿಕೊಂಡಿದೆ ಎಂದು ಅವರು ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ‘ಮೇರಾಬೂತ್ ಸಬ್ ಸೆ ಮಜಬೂತ್’ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಸಮಾನನಾಗರಿಕ ಸಂಹಿತೆ ಬಗ್ಗೆ ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆಳೆಯಲು ಹಾಗೂ ಪ್ರಚೋದಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆಂದು ಪ್ರಧಾನಿ ಆರೋಪಿಸಿದರು.

ಓಲೈಕೆಯ ಹಾಗೂ ವೋಟ್ ಬ್ಯಾಂಕ್ ರಾಜಕಾರಣವನ್ನು ಬಿಜೆಪಿಯೂ ಎಂದಿಗೂ ಅಳವಡಿಸಿಕೊಳ್ಳುವುದಿಲ್ಲ. ತ್ರಿವಳಿ ತಲಾಖ್ ಬೆಂಬಲಿಸುವವರು ಮುಸ್ಲಿಂ ಹೆಣ್ಣುಮಕ್ಕಳಿಗೆ ಘೋರವಾದ ಅನ್ಯಾಯ ಮಾಡುತ್ತಿದ್ದಾರೆಂದು ಪ್ರಧಾನಿ ಆಪಾದಿಸಿದರು. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮತಯಾಚನೆ ಮಾಡುವವರು, ಗ್ರಾಮೀಣರು ಹಾಗೂ ಬಡವರಿಗೆ ಗರಿಷ್ಠ ಅನ್ಯಾಯವನ್ನು ಎಸಗುತ್ತಿದ್ದಾರೆಂದು ಮೋದಿ ಪ್ರತಿಪಕ್ಷಗಳನ್ನು ಟೀಕಿಸಿದರು.

ಒಂದು ವೇಳೆ ತ್ರಿವಳಿತಲಾಖ್ ಇಸ್ಲಾಮಿನ ಅತ್ಯಗತ್ಯ ಭಾಗವೆಂದಾದಲ್ಲಿ, ಕತರ್, ಜೋರ್ಡಾನ್,ಇಂಡೋನೇಶ್ಯದಂತಹ ಮುಸ್ಲಿಂ ದೇಶಗಳಲ್ಲಿ ಅದನ್ನು ಯಾಕೆ ನಿಷೇಧಿಸಲಾಗಿದೆ ಎಂದವರು ಪ್ರಶ್ನಿಸಿದರು. ಶೇ.90ರಷ್ಟು ಸುನ್ನಿ ಮುಸ್ಲಿಮರಿರುವ ಈಜಿಪ್ಟ್ನಲ್ಲಿ 80ರಿಂದ 90 ವರ್ಷಗಳ ಹಿಂದೆಯೇ ತ್ರಿವಲಿ ತಲಾಖ್ ನಿಷೇಧಿಸಲಾಗಿತ್ತು ಎಂದರು.

ಸ್ಥಾಪಿತ ಹಿತಾಸಕ್ತಿಗಳನ್ನು ಹೊಂದಿರುವ ಕೆಲವು ರಾಜಕೀಯ ಪಕ್ಷಗಳ ತುಷ್ಟೀಕರಣದ ರಾಜಕೀಯವು, ಸಾಮಾಜಿಕ ಒಡಕಿಗೆ ಕಾರಣವಾಗಿದೆಯೆಂದು ಪ್ರಧಾನಿ ಹೇಳಿದರು. ವಿವಿಧ ರಾಜ್ಯಗಳಲ್ಲಿನ ಅನೇಕ ಜಾತಿಗಳವರು, ಲವಾರು ವರ್ಷಗಳಿಂದ ತಮ್ಮನ್ನು ಕಡೆಗಣಿಸಲಾಗುತ್ತಿದೆಯೆಂದು ಹೇಳುತ್ತಾ ಬಂದಿದದಾರೆ. ಆದರೆ ಪ್ರತಿಪಕ್ಷಗಳು ವಿಭಜನವಾದಿ ನೀತಿಯನ್ನು ಅನುಸರಿಸುತ್ತಾ ಬರುತ್ತಿದ್ದು,ಅವು ತುಷ್ಟೀಕರಣದ ರಾಜಕೀಯದ ಮೂಲಕ ಬೆಳೆಯಲು ಬಯಸುತ್ತಿವೆ. ‘‘ನಾವು ಹವಾನಿಯಂತ್ರಿತ ಕಚೇರಿಗಳಲ್ಲಿ ಕುಳಿತುಕೊಂಡು ಅಪ್ಪಣೆಗಳನ್ನು ಜಾರಿಗೊಳಿಸಲು ಹೋಗುವುದಿಲ್ಲ. ಜನತೆಯ ಜೊತೆಗಿರಲು ಕಠಿಣವಾದ ಹವಾಮಾನವನ್ನು ಎದುರಿಸುತ್ತಾ ಬಂದಿದ್ದೇವೆ ಎಂದರು.

ತುಷ್ಟೀಕರಣಕ್ಕೂ, ಸಂತುಷ್ಟೀಕರಣಕ್ಕೂ ಅಗಾಧ ವ್ಯತ್ಯಾಸವಿದೆಯೆಂದು ಹೇಳಿದ ಪ್ರಧಾನಿ ಬಿಜೆಪಿಯು ಸಂತುಷ್ಟೀಕರಣದಲ್ಲಿ ನಂಬಿಕೆಯಿರಿಸಿದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಸಂಘಟಿತ ಹೋರಾಟ ನಡೆಸಲು ಪ್ರತಿಪಕ್ಷಗಳು ಕೈಜೋಡಿಸಿರುವುದನ್ನು ಪ್ರಧಾನಿ ತನ್ನ ಭಾಷಣದಲ್ಲಿ ಟೀಕಿಸಿದರು. ‘‘ ಈ ಪಕ್ಷಗಳಲ್ಲಿನ ಹತಾಶೆಯ ವರ್ತನೆಯು ಈಗ ಇರುವಂತೆ 2014 ಹಾಗೂ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಷ್ಟೊಂದು ವ್ಯಕ್ತವಾಗಿರಲಿಲ್ಲ ಎಂದರು. ಕಾಂಗ್ರೆಸನ್ನು ನಿಂದಿಸಿದ ಪಕ್ಷಗಳೇ ಈಗ ಅದರ ಮುಂದೆ ತಲೆಬಾಗುತ್ತಿವೆ. 2024ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಗೆಲ್ಲಲಿದೆ ಎಂಬುದನ್ನು ಅವುಗಳ ಹತಾಶೆ ತೋರಿಸಿಕೊಡುತ್ತದೆ. 2024ರ ಲೋಕಸಭಾ ಚುನಾವಣೆಗೆ ಮೊದಲು ಆಧಾರರಹಿತ ಆರೋಪಗಳನ್ನು ಹೊರಿಸುವ ಮೂಲಕ ಪ್ರತಿಪಕ್ಷಗಳನ್ನು ಜನರನ್ನು ತಪ್ಪುದಾರಿಗೆಳೆಯಲು ಯತ್ನಿಸುತ್ತಿವೆ’’ ಎಂದಗು ಮೋದಿ ಹೇಳಿದರು.

ಪ್ರತಿಪಕ್ಷಗಳ ‘ಗ್ಯಾರಂಟಿ’ಗೆ ಪ್ರಧಾನಿ ತರಾಟೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷ ಘೋಷಿಸಿದ 5 ಗ್ಯಾರಂಟಿಗಳನ್ನು ಪ್ರಧಾನಿ ಪರೋಕ್ಷವಾಗಿ ಟೀಕಿಸಿದರು. ‘‘ ಇದೀಗ ಚುನಾವಣೆಗಳಲ್ಲಿ ಗ್ಯಾರಂಟಿ ಎಂಬ ಹೊಸ ಪದವನ್ನು ಜನಪ್ರಿಯಗೊಳಿಸಲಾಗುತ್ತಿದೆ. ಗ್ಯಾರಂಟಿ ಎಂದರೆ ಭ್ರಷ್ಟಾಚಾರ ಎಂದರ್ಥ. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಸಾರವಾದ ಛಾಯಾಚಿತ್ರವೊಂದರಲ್ಲಿ ಉಲ್ಲೇಖಿಸಿದ ಹಾಗೆ, ಒಂದು ವೇಳೆ ನೀವು ಈ ರಾಜಕೀಯ ಪಕ್ಷಗಳ ಭ್ರಷ್ಟಾಚಾರವನ್ನುಒಟ್ಟು ಸೇರಿಸಿದಲ್ಲಿ ಅದು 20 ಲಕ್ಷ ಕೋಟಿ ರೂ.ಗಳನ್ನೂ ಮೀರುತ್ತದೆ ಎಂದರು.

ಕಾಂಗ್ರೆಸ್, ಆರ್ಜೆಡಿ, ಡಿಎಂಕೆ, ಟಿಎಂಸಿ, ಎನ್ಸಿಪಿ ಪಕ್ಷಗಳನ್ನು ಹೆಸರಿಸಿದ ಪ್ರಧಾನಿ ಮೋದಿಯವರು, ಈ ಪಕ್ಷಗಳ ನಾಯಕರು ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿದರು. ‘‘ ಭ್ರಷ್ಟಾಚಾರವೇ ಈ ಪಕ್ಷಗಳು ಜನರಿಗೆ ನೀಡುವ ಏಕೈಕ ಖಾತರಿಯಾಗಿದೆ. ಇಂತಹ ಭ್ರಷ್ಟಾಚಾರವನ್ನು ತಾವು ಒಪ್ಪುತ್ತೇವೆಯೇ ಎಂಬುದನ್ನು ದೇಶದ ಜನತೆ ನಿರ್ಧರಿಸಬೇಕಾಗಿದೆ’’ ಎಂದು ಮೋದಿ ಹೇಳಿದರು.

‘‘ ಇಂದು ನಾನು ಕೂಡಾ ಒಂದು ಗ್ಯಾರಂಟಿಯ ಶಪಥ ಮಾಡುತ್ತೇನೆ.. ಒಂದು ವೇಳೆ ಅವರು ಭ್ರಷ್ಟಾಚಾರದ ಗ್ಯಾರಂಟಿಯನ್ನು ಹೊಂದಿದ್ದರೆ,ಬಡವರನ್ನು ದೋಚುವ ಎಲ್ಲಾ ಭ್ರಷ್ಟರೊಂದಿಗೆ ಕಠಿಣವಾಗಿ ವರ್ತಿಸಲಾಗುವುದು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮವನ್ನು ಕೈಗೊಂಡಾಗ ಅವರೆಲ್ಲಾ ಒಗ್ಗೂಡುತ್ತಾರೆ’’ ಎಂದು ಪ್ರಧಾನಿ ಪ್ರತಿಪಕ್ಷಗಳನ್ನು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News