ರೈಲಿನಿಂದಿಳಿದಾತನಿಗೆ ತಮ್ಮ ಲೋಕಸಭಾ ಅಭ್ಯರ್ಥಿ ಎಂದು ಸನ್ಮಾನಿಸಿದ ಬಿಜೆಪಿ ಕಾರ್ಯಕರ್ತರು!

Update: 2024-03-27 12:58 GMT

Photo : X/@ians_india

·

ಕಾನ್ಪುರ : ಬಿಜೆಪಿ ಟಿಕೇಟು ಘೋಷಣೆಯಾಗುತ್ತಿದ್ದಂತೆ, ದಿಲ್ಲಿಯಿಂದ ಕಾನ್ಪುರಕ್ಕೆ ಆಗಮಿಸಿದ ಪಕ್ಷದ ಅಭ್ಯರ್ಥಿ ಎಂದು ತಪ್ಪಾಗಿ ಭಾವಿಸಿ, ರೈಲಿನಿಂದ ಇಳಿದ ರಾಜ್ಯಸಭಾ ಸದಸ್ಯನಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನ ಮಾಡಿ ಜೈಕಾರ ಹಾಕಿದ ಘಟನೆಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾನ್ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆಯುವ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ನಡುವೆ ಭಾರೀ ಪೈಪೋಟಿಯಿತ್ತು. ಅಂತಿಮವಾಗಿ, ಹೈಕಮಾಂಡ್‌ನ ಮನವೊಲಿಸಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ರಮೇಶ್ ಅವಸ್ಥಿ ಎಂಬವರು ಯಶಸ್ವಿಯಾಗಿದ್ದರು.

ತಮ್ಮ ಹೆಸರು ಪ್ರಕಟವಾಗುತ್ತಿದ್ದಂತೆ ದಿಲ್ಲಿಯಲ್ಲಿದ್ದ ರಮೇಶ್ ಅವಸ್ಥಿ ಬುಧವಾರ ಕಾನ್ಪುರಕ್ಕೆ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಆಗಮಿಸಿದ್ದರು. ರಮೇಶ್ ಅವಸ್ತಿ ಅವರನ್ನು ಸ್ವಾಗತಿಸಲು, ಹೂ ಹಾರಗಳನ್ನು ಹಿಡಿದುಕೊಂಡು ನೂರಾರು ಬಿಜೆಪಿ ಕಾರ್ಯಕರ್ತರು ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೂ ಹಾಜರಿದ್ದರು.

ರೈಲು ನಿಲ್ದಾಣ ತಲುಪುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು “ಯೋಗಿ ಮೋದಿ ಝಿಂದಾಬಾದ್… ರಮೇಶ್ ಅವಸ್ಥಿ ಝಿಂದಾಬಾದ್” ಎಂದು ಜೈಕಾರ ಹಾಕತೊಡಗಿದರು. ರೈಲು ನಿಂತಾಗ ಅಭ್ಯರ್ಥಿ ರಮೇಶ್ ಅವಸ್ಥಿ ಹೊರಬರುವ ಮೊದಲೇ ರಾಜ್ಯಸಭಾ ಸಂಸದ ಬಾಬುರಾಮ್ ನಿಶಾದ್ ಹೊರಬಂದರು. ಈ ವೇಳೆ ಇವರೇ ‘ನಮ್ಮ ಅಭ್ಯರ್ಥಿ’ ಎಂದು ತಪ್ಪಾಗಿ ಅರ್ಥೈಸಿಕೊಂಡ ಬಿಜೆಪಿ ಕಾರ್ಯಕರ್ತರು ಬಾಬುರಾಮ್ ನಿಶಾದ್ ಅವರಿಗೆ ಹೂ-ಹಾರ, ಶಾಲು ಹಾಕಿ ಸನ್ಮಾನಿಸಿದರು.

ಪೇಚಿಗೆ ಸಿಲುಕಿದ ಬಾಬುರಾಮ್ ಅವರು ರಮೇಶ್ ಅವಸ್ಥಿ ಇನ್ನೂ ರೈಲಿನೊಳಳಗೆ ಇದ್ದಾರೆ ಎಂದು ತಿಳಿಸಲು ಪ್ರಯತ್ನಿಸಿದರಾದರೂ, ಕಾರ್ಯಕರ್ತರಿಗೆ ಅದು ಕೇಳಲಿಲ್ಲ. ಬಳಿಕ, ರಮೇಶ್ ಅವಸ್ಥಿ ಅವರು ಹೊರ ಬರುವುದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಬಳಿಕ ಬಾಬುರಾಮ್ ಅವರಿಗೆ ಹಾಕಿದ್ದ ಶಾಲು, ಹೂಹಾರಗಳನ್ನು ತಮ್ಮ ನೈಜ ಅಭ್ಯರ್ಥಿ ರಮೇಶ್ ಅವಸ್ಥಿ ಅವರಿಗೆ ಮತ್ತೆ ಹಾಕಿದರು. ಘಟನೆಯ ವೀಡಿಯೊ ವೈರಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News