'ಮೋದಿ-ಅದಾನಿ ಏಕ್ ಹೈ': ಸಂಸತ್ತಿನಲ್ಲಿ ಜಾಕೆಟ್ ಧರಿಸಿ ರಾಹುಲ್, ಪ್ರಿಯಾಂಕಾ ಸಹಿತ ವಿಪಕ್ಷದ ನಾಯಕರಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ
ಹೊಸದಿಲ್ಲಿ: ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸಿದ್ದ ಪ್ರತಿಪಕ್ಷಗಳ ನಾಯಕರು ಗುರುವಾರ ಸಂಸತ್ತಿನಲ್ಲಿ 'ಮೋದಿ ಅದಾನಿ ಏಕ್ ಹೈ (ಮೋದಿ ಮತ್ತು ಅದಾನಿ ಒಂದೇ)'' ಎಂದು ಬರೆದಿರುವ ಟೀಶರ್ಟ್ ಧರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಉದ್ಯಮಿ ಗೌತಮ್ ಅದಾನಿ ಮತ್ತು ಸೋದರಳಿಯನ ವಿರುದ್ಧದ ಲಂಚ ಮತ್ತು ವಂಚನೆ ಆರೋಪದ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯಿಂದ ತನಿಖೆಗೆ ಪ್ರತಿಪಕ್ಷಗಳು ಆಗ್ರಹಿಸಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದು, ಜಾಕೆಟ್ ನ ಹಿಂಬದಿಯಲ್ಲಿ'ಮೋದಿ-ಅದಾನಿ ಏಕ್ ಹೈ' ಎಂದು ಬರೆಯಲಾಗಿತ್ತು.
ಮೋದಿ ಜೀ ಅದಾನಿ ಜೀ ವಿರುದ್ಧ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಹಾಗೆ ಮಾಡಿದರೆ, ಅವರು ತನ್ನ ಬಗ್ಗೆಯೇ ತನಿಖೆಗೆ ಆದೇಶಿಸಿದಂತೆ, ʼಮೋದಿ ಔರ್ ಅದಾನಿ ಏಕ್ ಹೈ. ದೋ ನಹೀ ಹೇ, ಏಕ್ ಹೈ,'' ಎಂದು ರಾಹುಲ್ ಗಾಂಧಿ ಪ್ರತಿಭಟನೆ ವೇಳೆ ಹೇಳಿದ್ದಾರೆ.