ಇವಿಎಂ ಅಕ್ರಮ ಆರೋಪ: ಸುಪ್ರೀಂ ಮೆಟ್ಟಿಲೇರಲು ಇಂಡಿಯಾ ಮೈತ್ರಿಕೂಟ ಸಜ್ಜು
ಹೊಸದಿಲ್ಲಿ: ಇವಿಎಂ ಮತಯಂತ್ರಗಳ ಚುನಾವಣಾ ಕಾರ್ಯವಿಧಾನಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಇಂಡಿಯಾ ಮೈತ್ರಿಕೂಟವು, ಮತಯಂತ್ರಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸಜ್ಜಾಗಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಡಳಿತಾರೂಢ ಎನ್‌ಡಿಎ ಚುನಾವಣೆಯಲ್ಲಿ ವಂಚನೆ ಮಾಡಿದೆ ಎಂದು ಐಎನ್‌ಡಿಐಎ ಮೈತ್ರಿಕೂಟ ಆರೋಪಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಸರ್ಕಾರದ ಪರವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.
ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಪ್ರತಿಪಕ್ಷಗಳಿಂದ ಇದೇ ರೀತಿಯ ಆರೋಪ ಕೇಳಿ ಬರುತ್ತಿದೆ. ಎಕ್ಸಿಟ್ ಪೋಲ್‌ಗಳು ಪ್ರತಿಪಕ್ಷಗಳು ಭರ್ಜರಿ ಜನಾದೇಶವನ್ನು ಪಡೆಯಲಿವೆ ಎಂದು ಭವಿಷ್ಯ ನುಡಿದಿದ್ದವು. ಎಕ್ಸಿಟ್ ಪೋಲ್‌ಗಳ ನಂತರ ಸಂಭ್ರಮಾಚರಣೆ ಆರಂಭಿಸಿದ್ದ ಕಾಂಗ್ರೆಸ್‌ಗೆ ಮತ ಎಣಿಕೆ ನಂತರ ಮುಖಭಂಗವಾಗಿದೆ.
ಬಿಜೆಪಿ ಪಕ್ಷವು ತಮ್ಮ ಪರವಾಗಿ ಫಲಿತಾಂಶಗಳನ್ನು ತಿರುಚಲು ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ಬಿಜೆಪಿಯು ಮತ ಎಣಿಕೆ ಪ್ರಕ್ರಿಯೆಯನ್ನು ಕಳಂಕಗೊಳಿಸಿದೆ ಎಂದು ಆರೋಪಿಸಿದೆ.