ಯುದ್ಧಪೀಡಿತ ಗಾಝಾಗೆ ನೆರವು ಸಾಮಾಗ್ರಿಗಳನ್ನು ರವಾನಿಸಿದ ಭಾರತ
ಹೊಸದಿಲ್ಲಿ: ಭಾರತವು ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವಿನ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ಫೆಲೆಸ್ತೀನಿಯರಿಗಾಗಿ ರವಿವಾರ 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ಗಳಷ್ಟು ವಿಪತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಅಗತ್ಯ ಜೀವರಕ್ಷಕ ಔಷಧಿಗಳು,ಶಸ್ತ್ರಚಿಕಿತ್ಸಾ ಸಾಮಗ್ರಿಗಳು,ಟೆಂಟ್ಗಳು, ಸ್ಲೀಪಿಂಗ್ ಬ್ಯಾಗ್ಗಳು,ಟಾರ್ಪಾಲಿನ್ಗಳು,ನೈರ್ಮಲ್ಯ ಸಾಧನಗಳು,ಜಲ ಶುದ್ಧೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳು ಸೇರಿದಂತೆ ಸುಮಾರು 38 ಟನ್ಗಳಷ್ಟು ಮಾನವೀಯ ನೆರವನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನವು ಘಾಜಿಯಾಬಾದ್ ನ ಹಿಂಡನ್ ವಾಯುಪಡೆ ನಿಲ್ದಾಣದಿಂದ ಈಜಿಪ್ಟ್ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ನಡುವೆ ಔಷಧಿಗಳು ಮತ್ತು ಸೀಮಿತ ಪ್ರಮಾಣದ ಆಹಾರ ಸಾಮಗ್ರಿಗಳನ್ನು ಹೊತ್ತ ಸುಮಾರು 20 ಟ್ರಕ್ಗಳು ಶನಿವಾರ ಈಜಿಪ್ಟ್ನ ರಫಾ ಗಡಿಯಿಂದ ಗಾಝಾವನ್ನು ಪ್ರವೇಶಿಸಿವೆ.
ಆದರೆ ಗಾಝಾದಲ್ಲಿ ತುರ್ತು ಅಗತ್ಯಗಳನ್ನು ಪೂರೈಸಲು ದಿನಕ್ಕೆ ಕನಿಷ್ಠ 100 ಟ್ರಕ್ಗಳು ಬೇಕು. ಯಾವುದೇ ನೆರವಿನ ಪೂರೈಕೆ ನಿರಂತರವಾಗಿರಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿರಬೇಕು ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಸಂಘರ್ಷ ಆರಂಭಗೊಳ್ಳುವ ಮುನ್ನ ಸಾಮಾನ್ಯವಾಗಿ ಪ್ರತಿದಿನ ಗಾಝಾಕ್ಕೆ ನೂರಾರು ಟ್ರಕ್ಗಳು ಆಗಮಿಸುತ್ತಿದ್ದವು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಗಾಝಾದ ಏಕೈಕ ಇಸ್ರೇಲಿಯೇತರ ಗಡಿಯಾಗಿರುವ ರಫಾ ಅನ್ನು ತೆರೆಯಲು ಈಜಿಪ್ಟ್, ಇಸ್ರೇಲ್ ಮತ್ತು ಹಮಾಸ್ ನ ಒಪ್ಪಿಗೆ ಅಗತ್ಯವಾಗಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಈ ಗಡಿಯು ಈಗಲೂ ಮುಚ್ಚಿರುವುದಕ್ಕೆ ಈಜಿಪ್ಟ್ ಮತ್ತು ಇಸ್ರೇಲ್ ಪರಸ್ಪರರನ್ನು ಮತ್ತು ಹಮಾಸ್ ಅನ್ನು ದೂರುತ್ತಿವೆ.