ಜಮ್ಮು ಮತ್ತು ಕಾಶ್ಮೀರ ಚುನಾವಣೆ | ಸಮಾನ ಮನಸ್ಕ ಪಕ್ಷಗಳಿಗೆ ಬಾಗಿಲು ತೆರೆದಿದೆ : ಕಾಂಗ್ರೆಸ್ ಮುಖ್ಯಸ್ಥ

Update: 2024-10-02 13:07 GMT
PC : PTI

ಶ್ರೀನಗರ : ಒಂದು ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರ ರಚಿಸಲು ಸಮಾನ ಮನಸ್ಕ ಪಕ್ಷಗಳು ಹಾಗೂ ವ್ಯಕ್ತಿಗಳ ಬೆಂಬಲದ ಅಗತ್ಯ ಬಿದ್ದರೆ, ನ್ಯಾಷನಲ್ ಕಾನ್ಫರೆನ್ಸ್‌ -ಕಾಂಗ್ರೆಸ್ ಮೈತ್ರಿಕೂಟವು ಅಂಥವರ ಬೆಂಬಲ ಪಡೆಯಲು ಮುಕ್ತವಾಗಿದೆ ಎಂದು ಬುಧವಾರ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಮುಖ್ಯಸ್ಥ ತಾರೀಕ್ ಹಮೀದ್ ಕರ್ರಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದ ಮತದಾನ ಮುಕ್ತಾಯಗೊಂಡ ಮರುದಿನ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ರಾ, “ಜನರು ಮೈತ್ರಿಕೂಟದ ಪರವಾಗಿ ಅಥವಾ ಬಿಜೆಪಿಯನ್ನು ಅಧಿಕಾರ ಕೇಂದ್ರದಿಂದ ದೂರ ಇಡಲು ಮತ ಚಲಾಯಿಸಿದ್ದು, ಇದು ಉತ್ತಮ ಸಂಗತಿಯಾಗಿದೆ” ಎಂದು ತಿಳಿಸಿದ್ದಾರೆ.

“ಒಂದು ವೇಳೆ ಅಗತ್ಯ ಬಿದ್ದರೆ, ನಮ್ಮ ಬಾಗಿಲು ಸಮಾನ ಮನಸ್ಕ ವ್ಯಕ್ತಿಗಳು, ಶಕ್ತಿಗಳು ಹಾಗೂ ಪಕ್ಷಗಳಿಗೆ ಮುಕ್ತವಾಗಿದೆಅಂತಹ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವ ಕುರಿತು ಮೈತ್ರಿ ಕೂಟದ ಪಾಲುದಾರ ಪಕ್ಷಗಳೊಂದಿಗೆ ನಾವು ಚರ್ಚೆ ನಡೆಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಪಿಡಿಪಿ ಸಮಾನ ಮನಸ್ಕ ಪಕ್ಷವೆ?” ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕರ್ರಾ, ನಾನು ಯಾರ ಅರ್ಹತೆಯ ಕುರಿತೂ ಮಾತನಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಬಿಜೆಪಿಯ ಪ್ರತಿಗಾಮಿ, ದೌರ್ಜನ್ಯಕಾರಿ ನೀತಿಗಳ ವಿರುದ್ಧವಿರುವ ಸಮಾನ ಮನಸ್ಕರು ಎಂದಷ್ಟೆ ಹೇಳಿದ್ದೇನೆ” ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News