ಜಮ್ಮು ಕಾಶ್ಮೀರ ಆಡಳಿತವು ಖಾಸಗಿ ಕಂಪನಿಯ ಲಾಭಕ್ಕಾಗಿ ತನ್ನದೇ ಇಲಾಖೆಗಳ ಸಲಹೆ ಕಡೆಗಣಿಸಿ ಒಪ್ಪಂದವನ್ನು ತಿದ್ದುಪಡಿ ಮಾಡಿತ್ತು: ಐಎಎಸ್ ಅಧಿಕಾರಿ

Update: 2023-10-12 13:55 GMT

ಮನೋಜ್ ಸಿನ್ಹಾ. (photo: PTI)

ಶ್ರೀನಗರ: ಖಾಸಗಿ ವಿಮಾ ಅನುಕೂಲವಾಗುವಂತೆ ಮಾಡಲು ಲೆ.ಗ. ಮನೋಜ್ ಸಿನ್ಹಾ ನೇತೃತ್ವದ ಜಮ್ಮು-ಕಾಶ್ಮೀರ ಆಡಳಿತವು ತನ್ನ ಸ್ವಂತ ಇಲಾಖೆಗಳ ಸಲಹೆಗಳನ್ನು ಕಡೆಗಣಿಸಿ ಬಹುಕೋಟಿ ರೂ.ಗಳ ಒಪ್ಪಂದವನ್ನು ಮಧ್ಯದಲ್ಲಿಯೇ ತಿದ್ದುಪಡಿಗೊಳಿಸಿತ್ತು ಎಂದು ಐಎಎಸ್ ಅಧಿಕಾರಿಯೋರ್ವರು ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆಯ ಅನುಷ್ಠಾನಕ್ಕಾಗಿ ನೋಡಲ್ ಸಂಸ್ಥೆಯಾಗಿರುವ ಸ್ಟೇಟ್ ಹೆಲ್ತ್ ಏಜೆನ್ಸಿಯು 2020,ಡಿ.26ರಂದು ಬಜಾಜ್ ಅಲೈನ್ಝ್ ಜನರಲ್ ಇನ್ಶೂರನ್ಸ್ ಕಂಪನಿಯೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಎರಡು ವರ್ಷಗಳ ಬಳಿಕ ವಾರ್ಷಿಕ ಮರುಪರಿಶೀಲನೆಯ ನಿಬಂಧನೆಯನ್ನು ಒಪ್ಪಂದವು ಒಳಗೊಂಡಿತ್ತು. ಮರುದಿನವೇ ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಡಾ.ಅರುಣ ಕೆ.ಮೆಹ್ತಾ ಅವರ ಪುತ್ರ ಲಕ್ಷ್ಯ ಮೆಹ್ತಾರನ್ನು ಬಜಾಜ್ ವಿಮಾ ಕಂಪನಿಯು ನೇಮಕ ಮಾಡಿಕೊಂಡಿದ್ದು, ಪ್ರಸ್ತುತ ಅವರು ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2021 ಸೆಪ್ಟಂಬರ್‌ನಲ್ಲಿ ವಿಮಾ ಕಂಪನಿಯು ನಷ್ಟದ ಕಾರಣವನ್ನು ನೀಡಿ ಒಪ್ಪಂದದಿಂದ ಹೊರಬರಲು ಬಯಸಿದ್ದಾಗ ಎಸ್‌ಎಚ್‌ಎ ಯಾವುದೇ ಕಾನೂನು ಸಮರ್ಥನೆಯಿಲ್ಲದೆ ಹಾಲಿ ಪಾಲಿಸಿಗೆ ಶೇ.15ರಷ್ಟು ಹೆಚ್ಚುವರಿ ಮೊತ್ತವನ್ನು ಒದಗಿಸುವ ಮೂಲಕ ಒಪ್ಪಂದವನ್ನು ಪರಿಷ್ಕರಿಸಿತ್ತು. ಜಮ್ಮು-ಕಾಶ್ಮೀರದ ಹಣಕಾಸು ಮತ್ತು ಕಾನೂನು ಇಲಾಖೆಗಳು ಇದನ್ನು ಆಕ್ಷೇಪಿಸಿದ್ದರೂ ಲೆ.ಗ.ಸಿನ್ಹಾ ನೇತೃತ್ವದ ಆಡಳಿತಾತ್ಮಕ ಮಂಡಳಿಯು ‘ಕಾನೂನು ಬಾಹಿರ’ ಬದಲಾವಣೆಗಳನ್ನು ಕ್ರಮಬದ್ಧಗೊಳಿಸಿತ್ತು.

ಕಾರ್ಯಕರ್ತರೋರ್ವರು ಈ ಅಕ್ರಮಗಳನ್ನು ಸಿಬಿಐ ಗಮನಕ್ಕೆ ತಂದಿದ್ದು, ಆರು ತಿಂಗಳುಗಳ ಬಳಿಕ ಸಿಬಿಐ ಈ ದೂರನ್ನು ಜಮ್ಮು-ಕಾಶ್ಮೀರದ ಭ್ರಷ್ಟಾಷಾರ ನಿಗ್ರಹ ದಳಕ್ಕೆ ವರ್ಗಾಯಿಸಿತ್ತು. ದಳದ ನಿರ್ದೇಶಕರು ಪ್ರಕರಣದಲ್ಲಿ ಶಂಕಿತ ಆರೋಪಿಗಳಲ್ಲೋರ್ವರಾಗಿರುವ ಲೆ.ಗ.ಸಿನ್ಹಾ ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಇವು ಜಮ್ಮು-ಕಾಶ್ಮೀರದ ಸಾರ್ವಜನಿಕ ಉದ್ಯಮಗಳ ಘಟಕದ ಅಧ್ಯಕ್ಷ ಹಾಗೂ 1992ನೇ ತಂಡದ ಐಎಎಸ್ ಅಧಿಕಾರಿ ಅಶೋಕಕುಮಾರ ಪರಮಾರ್ ಅವರು ಸಿಬಿಐಗೆ ಬರೆದಿರುವ ಪತ್ರದಲ್ಲಿನ ಪ್ರಮುಖ ಅಂಶಗಳಾಗಿವೆ. ಪತ್ರವು ಈ ವಿಷಯದಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮತ್ತು ಸಿಬಿಐನಿಂದ ಆಳವಾದ ತನಿಖೆಗೆ ಆಗ್ರಹಿಸಿದೆ.

ಪರಮಾರ್ ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆ ಜಲಜೀವನ ಮಿಷನ್‌ನ ಅನುಷ್ಠಾನದಲ್ಲಿಯ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದರು. ತನ್ನ ಪತ್ರದಲ್ಲಿ ವಿಸಲ್‌ಬ್ಲೋವರ್ಸ್ ಪ್ರೊಟೆಕ್ಷನ್ ಆ್ಯಕ್ಟ್,2014ರಡಿ ರಕ್ಷಣೆಯನ್ನೂ ಕೋರಿರುವ ಪರಮಾರ್ ಪತ್ರದ ಪ್ರತಿಗಳನ್ನ್ನು ಪ್ರಧಾನಿ ಕಚೇರಿ,ಸಂಪುಟ ಕಾರ್ಯದರ್ಶಿ,ಗೃಹ ಸಚಿವಾಲಯ,ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ಐಆರ್‌ಡಿಎ ಅಧ್ಯಕ್ಷರಿಗೂ ರವಾನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News