ಜುಲೈ 24 ರಂದು 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

Update: 2023-06-27 18:03 GMT

ಫೋಟೋ- PTI

ದೆಹಲಿ: 10 ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ (EC) ಮಂಗಳವಾರ ತಿಳಿಸಿದೆ.

ಪಶ್ಚಿಮ ಬಂಗಾಳದಿಂದ ಆರು, ಗುಜರಾತ್‌ನಿಂದ ಮೂರು ಮತ್ತು ಗೋವಾದಿಂದ ಒಂದು ಸ್ಥಾನಕ್ಕೆ ಪ್ರಸ್ತುತ ಅದನ್ನು ಪ್ರತಿನಿಧಿಸುವವರ ಅವಧಿ ಮುಕ್ತಾಯವಾಗುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗುಜರಾತ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿ ಬಿಜೆಪಿಯ ಮೂವರ ಅವಧಿ ಆಗಸ್ಟ್ 18 ರಂದು ಮುಕ್ತಾಯವಾಗುವುದರಿಂದ ಚುನಾವಣೆ ನಿಗದಿಯಾಗಿದೆ.

ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒ’ಬ್ರೇನ್, ಡೋಲಾ ಸೇನ್, ಸುಶ್ಮಿತಾ ದೇವ್, ಶಾಂತಾ ಛೆಟ್ರಿ ಮತ್ತು ಸುಖೇಂದು ಶೇಖರ್ ರೇ ಮತ್ತು ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ ಅವರ ಅವಧಿ ಮುಕ್ತಾಯವಾಗುವುದರಿಂದ ಪಶ್ಚಿಮ ಬಂಗಾಳದ ಲೋಕಸಭಾ ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಗಿದೆ. ಅವರ ಅವಧಿಯೂ ಆಗಸ್ಟ್ 18 ರಂದು ಕೊನೆಗೊಳ್ಳುತ್ತದೆ. ಗೋವಾದಲ್ಲಿ ಬಿಜೆಪಿ ಸಂಸದ ವಿನಯ್ ಡಿ. ತೆಂಡೂಲ್ಕರ್ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ; ಇವರ ಅಧಿಕಾರಾವಧಿ ಜುಲೈ 28ಕ್ಕೆ ಕೊನೆಗೊಳ್ಳಲಿದೆ.

ಜುಲೈ 6 ರಂದು ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ಜುಲೈ 13 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದೆ. ಅಭ್ಯರ್ಥಿಗಳು ಜುಲೈ 17 ರೊಳಗೆ ತಮ್ಮ ನಾಮಪತ್ರವನ್ನು ಹಿಂಪಡೆಯಬಹುದು. ಜುಲೈ 24 ರಂದು ಮತದಾನ ಮತ್ತು ಮತ ಎಣಿಕೆ ನಡೆಯಲಿದೆ.

ಎಪ್ರಿಲ್ 11 ರಂದು ತೃಣಮೂಲ ಕಾಂಗ್ರೆಸ್ ಸಂಸದ ಲುಯಿಜಿನ್ಹೋ ಜೋಕ್ವಿಮ್ ಫಲೈರೊ ಅವರು ರಾಜೀನಾಮೆ ನೀಡಿದ ನಂತರ ತೆರವಾದ ಪಶ್ಚಿಮ ಬಂಗಾಳದಿಂದ ಒಂದು ಸ್ಥಾನಕ್ಕೆ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ. ಅವರ ಅವಧಿಯು ಏಪ್ರಿಲ್ 2, 2026 ರವರೆಗೆ ಇತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News