ವಿಧಿ 370ರ ರದ್ದತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುವ ಮುನ್ನವೇ ತಮ್ಮ ಮೇಲೆ ದಾಳಿ ಸಾಧ್ಯತೆ: ಕಾಶ್ಮೀರ ನಾಯಕರ ಆತಂಕ

Update: 2023-12-10 09:52 GMT

 ಒಮರ್ ಅಬ್ದುಲ್ಲಾ  , ಮೆಹಬೂಬಾ ಮುಫ್ತಿ | Photo: PTI 

ಶ್ರೀನಗರ: ಈ ಮುಂಚಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ವಿಧಿ 370ರ ರದ್ದತಿ ಕುರಿತು ಸೋಮವಾರ ಬಹು ನಿರೀಕ್ಷಿತ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಲಿದ್ದು, ಈ ತೀರ್ಪಿಗೂ ಮುನ್ನವೇ ಕೇಂದ್ರ ಸರ್ಕಾರವು ತಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಣಿವೆ ರಾಜ್ಯವಾದ ಕಾಶ್ಮೀರದ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರ ಸರ್ಕಾರದ ಈ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಸಾಧ್ಯತೆ ಇದ್ದು, ಈಗಾಗಲೇ ಭದ್ರತಾ ಸಂಸ್ಥೆಗಳು ಪಿಡಿಪಿ ಕಾರ್ಯಕರ್ತರ ಹೆಸರುಗಳನ್ನು ಕಲೆ ಹಾಕಲು ಪ್ರಾರಂಭಿಸಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಕಳೆದ ರಾತ್ರಿಯಿಂದ, ನಾನು ನೋಡುತ್ತಿರುವಂತೆ ರಾಜಕೀಯ ಪಕ್ಷಗಳು, ನಿರ್ದಿಷ್ಟವಾಗಿ ಪಿಡಿಪಿ ಪಕ್ಷದ ಕಾರ್ಯಕರ್ತರ ಪಟ್ಟಿಯನ್ನು ಪೊಲೀಸ್ ಠಾಣೆಗಳ ಮೂಲಕ ಪಡೆದುಕೊಳ್ಳಲಾಗುತ್ತಿದೆ ಎಂದು ನಾನು ಕೇಳುತ್ತಿದ್ದೇನೆ” ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.

“ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಹಿತಾಸಕ್ತಿಗೆ ಪೂರಕವಲ್ಲದ ಆದರೆ, ಬಿಜೆಪಿ ಕಾರ್ಯಸೂಚಿಯನ್ನು ಮತ್ತಷ್ಟು ಮುಂದುವರಿಸುವ ಸಾಧ್ಯತೆ ಇರುವ ಕೆಲವು ನಿರ್ಣಯಗಳು ಹೊರಬರುವಂತೆ ಕಾಣಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

“ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಅದರ ಬಗ್ಗೆ ನನಗೆ ವಿಷಾದವಿದೆ. ನಿಮ್ಮ ಹೊಣೆಗಾರಿಕೆಯು ಬಿಜೆಪಿಯ ಕಾರ್ಯಸೂಚಿಯನ್ನು ಮುಂದುವರಿಸುವುದಲ್ಲ; ಬದಲಿಗೆ ದೇಶ ಹಾಗೂ ಅದರ ಸಂವಿಧಾನದ ಸಮಗ್ರತೆಯನ್ನು ಕಾಪಾಡುವುದಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಹೇಳಲು ನಾನು ಬಯಸುತ್ತೇನೆ. ನಿಮಗೆ ಅದರ ಬಗ್ಗೆ ಗೌರವವಿರಬೇಕು” ಎಂದು ಅವರು ಎಚ್ಚರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸಮ್ಮತಿಯಿಲ್ಲದೆ ವಿಧಿ 370 ಅನ್ನು ಬದಲಿಸಲು ಬರುವುದಿಲ್ಲ ಎಂಬ ಪೂರ್ವ ಆದೇಶವಿದ್ದರೂ, ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ನೀಡಲು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿರುವ ಬಗ್ಗೆ ಮೆಹಬೂಬಾ ವಿಷಾದ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬೆನ್ನಿಗೇ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವನ್ನು ವಿಧಾನಸಭೆಯು ರಚಿಸಿತ್ತಾದರೂ, ನಂತರ ಅದನ್ನು ವಿಸರ್ಜಿಸಲಾಗಿತ್ತು.

“ಆಗಸ್ಟ್ 5, 2019ರಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯವು ಕಾನೂನುಬಾಹಿರ, ಸಂವಿಧಾನವಿರೋಧಿ, ಜಮ್ಮು ಮತ್ತು ಕಾಶ್ಮೀರ ವಿರೋಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಜನರಿಗೆ ಮಾಡಲಾಗಿದ್ದ ಭರವಸೆಗಳ ವಿರುದ್ಧ ಎಂದು ತೀರ್ಪು ನೇರವಾಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ತೀರ್ಪು ಜಮ್ಮು ಮತ್ತು ಕಾಶ‍್ಮೀರ ಜನತೆಯ ಪರವಾಗಿರಲಿ ಎಂದಷ್ಟೆ ನಾನು ಆಶಿಸಬಲ್ಲೆ ಮತ್ತು ಪ್ರಾರ್ಥಿಸಬಲ್ಲೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ತೀರ್ಪು ಹೊರಬರುವುದಕ್ಕೂ ಮುನ್ನ ಕಾಶ್ಮೀರ ರಾಜಕಾರಣಿಗಳನ್ನು ಗೃಹಬಂಧನಕ್ಕೆ ದೂಡುವ ಸಾಧ್ಯತೆ ಇದೆ ಎಂದೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

“ನಮ್ಮನ್ನು ಗೃಹ ಬಂಧನದಲ್ಲಿರಿಸಲು ಅವರಿಗೆ ಒಂದು ನೆಪ ಬೇಕಾಗಿದೆ ಹಾಗೂ ಆ ನೆಪ ಅವರ ಬಳಿ ಇದೆ. ನಮಗೆ ತೀರ್ಪು ಏನು ಎಂದು ತಿಳಿದಿರದಿದ್ದರೂ, ಅವರಿಗೆ ತಿಳಿದಿದೆ. ಆದರೆ, ಅದು ಅವರಿಗೆ ತಿಳಿದಿದ್ದರೆ, ಅದರ ಕುರಿತು ತನಿಖೆಯಾಗಬೇಕು” ಎಂದು ಕುಲ್ಗಮ್ ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಮರ್ ಆಗ್ರಹಿಸಿದ್ದಾರೆ.

ಸೋಮವಾರ ತಮ್ಮ ನಿವಾಸಗಳಿಂದ ಹೊರ ಹೋಗಲು ಅವಕಾಶ ನೀಡಲಾಗುವುದಿಲ್ಲ ಎಂದು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಈಗಾಗಲೇ ಹೇಳಲಾಗಿದೆ ಎಂದು ಒಮರ್ ಮಾಹಿತಿ ನೀಡಿದ್ದಾರೆ.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಒಮರ್, ಸೋಮವಾರ ಸಂಗ್ರಾಮ ಬಾರಾಮುಲ್ಲಾದಲ್ಲಿ ನಡೆಯಬೇಕಿದ್ದ ಪಕ್ಷದ ಸಮಾವೇಶಕ್ಕೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಶುಕ್ರವಾರ ಸರ್ಕಾರವು ನ್ಯಾಷನಲ್ ಕಾನ್ಫರೆನ್ಸ್ ಗೆ ತಿಳಿಸಿದೆ ಎಂದೂ ಹೇಳಿದ್ದಾರೆ.

“ನಾವು ಸಂಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಂದುವರಿಸಬೇಕೆ ಎಂಬ ಕುರಿತು ಚರ್ಚಿಸುತ್ತಿದ್ದೇವೆ ಹಾಗೂ ಈ ನಡುವೆ, ಸೋಮವಾರದ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರವು ನಮಗೆ ಪತ್ರ ರವಾನಿಸಿದೆ. ಅನುಮತಿಯನ್ನು ಯಾಕೆ ರದ್ದುಗೊಳಿಸಲಾಗಿದೆ ಎಂದೂ ಅವರು ವಿವರಿಸಿಲ್ಲ. ನೀವು (ಸರ್ಕಾರ) ಯಾವುದರ ಬಗ್ಗೆ ಭೀತರಾಗಿದ್ದೀರಿ?” ಎಂದು ಒಮರ್ ಪ್ರಶ್ನಿಸಿದ್ದಾರೆ.

ಸೋಮವಾರ ಏನಾಗಬಹುದು ಎಂದು ಯಾರೂ ಕೂಡಾ ಅಂದಾಜಿಸಲು ಸಾಧ್ಯವಿಲ್ಲ. ತೀರ್ಪು ಹೊರಬಂದ ನಂತರ ನಮ್ಮ ಪಕ್ಷವು ಔಪಚಾರಿಕ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಒಮರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News