ಕೇರಳ | ಬಿಜೆಪಿಯ ʼಬುಲ್ಡೋಝರ್ ತಂತ್ರʼ ಬಳಸಿದ ಕಾಂಗ್ರೆಸ್ ಆಡಳಿತದ ಮಹಾನಗರ ಪಾಲಿಕೆ ; ಕಸ ಆಯುವವರ ಶೆಡ್ ನೆಲಸಮ

Update: 2024-09-17 17:01 GMT

PC : thenewsminute.com

ತಿರುವನಂತಪುರಂ : ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿ ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಝರ್ ಕಾರ್ಯಾಚರಣೆಯನ್ನು ನೆನಪಿಸುವಂತಹ ನೆಲಸಮ ಕಾರ್ಯಾಚರಣೆಯೊಂದು ಕೇರಳದ ಕಾಂಗ್ರೆಸ್ ಆಡಳಿತವಿರುವ ಕಲಮಸ್ಸೆರಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ.

ಕಲಮಸ್ಸೆರಿಯ ಖಾಲಿ ಜಾಗವೊಂದರಲ್ಲಿ ಗುಜರಿ ಸಾಮಾನುಗಳ ಶೆಡ್ ನಿರ್ಮಿಸಿಕೊಂಡಿದ್ದ ಜೈಗನ್ ಬೀಬಿ ಹಾಗೂ ಆಕೆಯ ಪತಿ ಸಾಬೂ ಮೊಂಟೋಲ್‌ ಈ ನೆಲಸಮ ಕಾರ್ಯಾಚರಣೆಯಿಂದ ದಿಗ್ಮೂಢರಾಗಿದ್ದಾರೆ. ತೀರಾ ಕಷ್ಟದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಈ ದಂಪತಿಗಳೀಗ ದಿಕ್ಕು ತೋಚದಂತಾಗಿದ್ದಾರೆ.

ಕಲಮಸ್ಸೆರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನವೊಂದರಲ್ಲಿ ಜೈಗನ್ ಬೀಬಿ ಮತ್ತು ಸಾಬು ಮೊಂಟೋಲ್‌ ದಂಪತಿಗಳು ಗುಜರಿ ಸಾಮಾನುಗಳನ್ನು ಸಂಗ್ರಹಿಸಿಡಲು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡಿದ್ದರು. ಆದರೆ, ಈ ಶೆಡ್ ನಿಂದ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತಿದೆ, ಮಾಲಿನ್ಯವಾಗುತ್ತಿದೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದು ಆರೋಪಿಸಿ, ಕಾಂಗ್ರೆಸ್ ಆಡಳಿತವಿರುವ ಕಲಮಸ್ಸೆರಿ ಮಹಾನಗರ ಪಾಲಿಕೆಯು ಈ ದಂಪತಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ವಿರುದ್ಧ ನಿವೇಶನದ ಮಾಲಕರಾದ ಮುಹಮ್ಮದ್ ಸೈಯದ್ ಕೆ.ಎ. ಅವರು ಕಾನೂನು ತಜ್ಞರಿಂದ ತಡೆಯಾಜ್ಞೆ ತರಲು ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ನುಗ್ಗಿರುವ ಬುಲ್ಡೋಝರ್ ಗಳು ಜೈಗನ್ ಬೀಬಿ ಮತ್ತು ಸಾಬು ಮೊಂಟೋಲ್‌ ದಂಪತಿಗಳ ತಾತ್ಕಾಲಿಕ ಶೆಡ್ ಅನ್ನು ನೆಲಸಮಗೊಳಿಸಿವೆ. ಈ ಕಾರ್ಯಾಚರಣೆಯಿಂದ ಜೈಗನ್ ಬೀಬಿ ಮತ್ತು ಸಾಬು ಮೊಂಟೋಲ್‌ ದಂಪತಿಗಳು ಹಾಗೂ ಅವರ ಮಕ್ಕಳು ಅಕ್ಷರಶಃ ಕಂಗಾಲಾಗಿದ್ದಾರೆ.

 

PC : thenewsminute.com

ಮಾಸಿಕ ರೂ. 30,000 ಬಾಡಿಗೆ ನೀಡಿ ಈ ನಿವೇಶನದಲ್ಲಿ ರೂ. 5 ಲಕ್ಷ ವೆಚ್ಚ ಮಾಡಿ ತಾತ್ಕಾಲಿಕ ಶೆಡ್ ಹಾಕಿಕೊಂಡಿದ್ದ ಜೈಗನ್ ಬೀಬಿ ಮತ್ತು ಕುಟುಂಬದ ಸದಸ್ಯರೀಗ ಅಕ್ಷರಶಃ ಬೀದಿಪಾಲಾಗಿದ್ದಾರೆ. ಈ ನಿವೇಶನದ ಬಾಡಿಗೆ ಭರಿಸಲು ಜೈಗನ್ ಬೀಬಿ ಕುಟುಂಬದಲ್ಲಿನ ಮಹಿಳೆಯರು ಮನೆಗೆಲಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.

 


PC : thenewsminute.com

ಆದರೆ, ಕಲಮಸ್ಸೆರಿ ಮಹಾನಗರ ಪಾಲಿಕೆಯು ನೆಲಸಮ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ, ಸ್ಥಳೀಯ ಕಾಂಗ್ರೆಸ್ ನಾಯಕರಾದ ಅಮೀರ್ ನೇತೃತ್ವದ ಗುಂಪೊಂದು ಜೈಗನ್ ಬೀಬಿ ಕುಟುಂಬದ ಸದಸ್ಯರಿಗೆ ಜಾಗ ತೆರವುಗೊಳಿಸುವಂತೆ ಬೆದರಿಕೆ ಹಾಕಿತ್ತು. ಆದರೆ, ಆ ಬೆದರಿಕೆಗೆ ಅವರು ಜಗ್ಗದಾಗ, ಕಲಮಸ್ಸೆರಿ ಮಹಾನಗರ ಪಾಲಿಕೆಯ ಮೂಲಕ ನೆಲಸಮ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

 PC : thenewsminute.com

 PC : thenewsminute.com

ಈ ಕುರಿತು ಪ್ರತಿಕ್ರಿಯಿಸಿರುವ ಪ್ರೊಗ್ರೆಸ್ಸಿವ್ ವರ್ಕರ್ಸ್ ಆರ್ಗನೈಸೇಷನ್ ಎಂಬ ಸರಕಾರೇತರ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಮ್ಯಾಥ್ಯೂ, “ಮಕ್ಕಳೀಗಲೂ ಭಯಭೀತರಾಗಿದ್ದಾರೆ. ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿಯಲ್ಲಿ ಬಡವರ ಮನೆಗಳನ್ನು ನೆಲಸಮಗೊಳಿಸುವ ಬಿಜೆಪಿ ಸರಕಾರಕ್ಕೂ, ಕಾಂಗ್ರೆಸ್ ಆಡಳಿತದ ಕಲಮಸ್ಸೆರಿ ಮಹಾನಗರ ಪಾಲಿಕೆ ಹಾಗೂ ಅದರ ಸ್ಥಳೀಯ ನಾಯಕರಿಗೂ ಯಾವ ವ್ಯತ್ಯಾಸವಿದೆ? ರಾಹುಲ್ ಗಾಂಧಿ ಶ್ರಮಿಕರ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಹಾಗೂ ಮುಖ್ಯ ವಾಹಿನಿಗಳಲ್ಲಿ ಬಿಂಬಿಸಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಮಹಾನಗರ ಪಾಲಿಕೆಯೇ ಶ್ರೂಮಿಕರ ತಾತ್ಕಾಲಿಕ ಶೆಡ್ ಅನ್ನು ನೆಲಸಮಗೊಳಿಸಿದೆ” ಎಂದು ಕಿಡಿ ಕಾರುತ್ತಾರೆ.

ಆದರೆ, ಕಲಮಸ್ಸೆರಿ ಮಹಾನಗರ ಪಾಲಿಕೆಯ ಕಾರ್ಯದರ್ಶಿ ಅನಿಲ್ ಕುಮಾರ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಮಹಾನಗರ ಪಾಲಿಕೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತಾತ್ಕಾಲಿಕ ಶೆಡ್ ನಲ್ಲಿ ಯಾವುದೇ ಜನವಸತಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ತಾತ್ಕಾಲಿಕ ಶೆಡ್ ಅನ್ನು ವಿದ್ಯುತ್ ತಂತಿಯಡಿ ನಿರ್ಮಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಈ ಸಂಬಂಧ ಜೈಗನ್ ಬೀಬಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ದೂರು ಸಲ್ಲಿಸಿದ್ದಾರೆ.

ಸೌಜನ್ಯ: thenewsminute.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News