ಕೊಚ್ಚಿಯನ್ನು ರಾಜಧಾನಿ ಮಾಡುವಂತೆ ಸಂಸದನ ಬೇಡಿಕೆ: ತಿರಸ್ಕರಿಸಿದ ಕೇರಳ ಸರಕಾರ
ಹೊಸದಿಲ್ಲಿ: ರಾಜ್ಯ ರಾಜಧಾನಿಯನ್ನು ತಿರುವನಂತಪುರಂನಿಂದ ಕೊಚ್ಚಿಗೆ ಸ್ಥಳಾಂತರಿಸುವಂತೆ ಲೋಕಸಭೆ ಸದಸ್ಯ ಹಿಬಿ ಈಡನ್ ಸಂಸತ್ತಿನಲ್ಲಿ ಖಾಸಗಿ ವಿಧೇಯಕ ಮೂಲಕ ಎತ್ತಿದ್ದ ಬೇಡಿಕೆಯನ್ನು ಕೇರಳ ಸರಕಾರ ಅಧಿಕೃತವಾಗಿ ತಿರಸ್ಕರಿಸಿದೆ.
ಎರ್ನಾಕುಲಂನ ಕಾಂಗ್ರೆಸ್ ಸಂಸದ ಹಿಬಿ ಅವರು ಈ ವರ್ಷದ ಮಾರ್ಚ್‌ನಲ್ಲಿ ಸಂಸತ್ ಅಧಿವೇಶನದಲ್ಲಿ ರಾಜ್ಯ ರಾಜಧಾನಿ ಸ್ಥಳಾಂತರಿಸಲು ಬೇಡಿಕೆ ಇಟ್ಟು ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಅದರ ಬಳಿಕ, ಕೇಂದ್ರ ಗೃಹ ಸಚಿವಾಲಯವು ಈ ವಿಷಯದ ಬಗ್ಗೆ ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು.
ಮುಂದಿನ ಕ್ರಮಗಳನ್ನು ಮುಂದುವರಿಸಲು ಸಂಸದರ ಬೇಡಿಕೆಯ ಬಗ್ಗೆ ಕೇರಳ ರಾಜ್ಯ ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವಾಲಯವು ತನ್ನ ಪತ್ರದಲ್ಲಿ ಹೇಳಿತ್ತು.
ಆದರೆ, ರಾಜ್ಯ ಸರ್ಕಾರ ಹಿಬಿ ಅವರ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಲಹೆ ಅಪ್ರಾಯೋಗಿಕ ಎಂದು ನಿಲುವು ತಳೆದಿದೆ.
ಕೇರಳ ರಚನೆಯಾದ ನಂತರ ತಿರುವನಂತಪುರ ನಗರವು ರಾಜಧಾನಿ ಸ್ಥಾನಮಾನವನ್ನು ಅನುಭವಿಸಿದೆ, ತಿರುವನಂತಪುರಂನಿಂದ ರಾಜಧಾನಿಯನ್ನು ಸ್ಥಳಾಂತರಿಸುವುದು ಅನಗತ್ಯ ಎಂದು ರಾಜ್ಯ ಸರ್ಕಾರ ಭಾವಿಸುತ್ತದೆ. ಇದಲ್ಲದೆ, ರಾಜಧಾನಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಂಪೂರ್ಣ ಮೂಲ ಸೌಕರ್ಯಗಳು ಈಗಾಗಲೇ ತಿರುವನಂತಪುರದಲ್ಲಿ ಅಸ್ತಿತ್ವದಲ್ಲಿವೆ. ಮತ್ತೊಂದೆಡೆ, ಕೊಚ್ಚಿ ಮೆಟ್ರೋ ನಗರವಾಗಿದ್ದು, ಮತ್ತಷ್ಟು ವಿಸ್ತರಣೆ ಮತ್ತು ಅಭಿವೃದ್ಧಿಗೆ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿನಾಕಾರಣ ರಾಜಧಾನಿಯನ್ನು ಸ್ಥಳಾಂತರಿಸುವುದರಿಂದ ರಾಜ್ಯ ಸರಕಾರಕ್ಕೆ ಭಾರಿ ಆರ್ಥಿಕ ಹೊರೆಯಾಗಲಿದೆ ಎಂದು ಕೇರಳ ಸರ್ಕಾರ ಹೇಳಿದೆ.
ತಿರುವನಂತಪುರಂ ರಾಜ್ಯದ ದಕ್ಷಿಣ ತುದಿಯಲ್ಲಿ ಇರುವುದರಿಂದ ಕೇರಳದ ಉತ್ತರದ ಜಿಲ್ಲೆಗಳ ಜನರು ವಿವಿಧ ಉದ್ದೇಶಗಳಿಗಾಗಿ ತಿರುವನಂತಪುರಕ್ಕೆ ಪ್ರಯಾಣಿಸಲು ಕಷ್ಟಪಡುತ್ತಾರೆ ಎಂದು ಹಿಬಿ ಹೇಳಿದ್ದರು.
ಈ ವಾದಕ್ಕೆ ಪ್ರತಿಕ್ರಿಯಿಸಿರುವ ಕೇರಳ ಸರ್ಕಾರವು, ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈ ಕೂಡ ಆ ರಾಜ್ಯದ ಒಂದು ಮೂಲೆಯಲ್ಲಿದೆ, ಅದು ಕೇರಳಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ಗಮನಿಸಿದೆ.
ಈ ನಡುವೆ, ಕೇರಳದ ಮತ್ತೊಬ್ಬ ಕಾಂಗ್ರೆಸ್ ಸಂಸದ ಅಡೂರ್ ಪ್ರಕಾಶ್, ರಾಜ್ಯದ ರಾಜಧಾನಿಯನ್ನು ಬದಲಾಯಿಸುವ ಬಗ್ಗೆ ತಮ್ಮ ಪಕ್ಷವು ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ.
“ರಾಜಧಾನಿ ಬದಲಾಯಿಸುವುದು ಸುಲಭವಲ್ಲ. ತಿರುವನಂತಪುರಂ ಯಾವಾಗಲೂ ಕೇರಳದ ರಾಜಧಾನಿಯಾಗಿದೆ. ರಾಜಧಾನಿ ಸ್ಥಳಾಂತರದ ಬಗ್ಗೆ ತುರ್ತು ಚರ್ಚೆಯ ಅಗತ್ಯವಿಲ್ಲ, ”ಎಂದು ಅವರು ಹೇಳಿದ್ದಾರೆ.