ಧಾರ್ಮಿಕ ಸಾಮರಸ್ಯ, ಸಹಬಾಳ್ವೆ ಮತ್ತು ಭ್ರಾತೃತ್ವಕ್ಕೆ ಕೇರಳವೇ ಕೊನೆಯ ಆಸರೆ: ಪಿಣರಾಯಿ ವಿಜಯನ್

Update: 2024-02-25 17:59 GMT

ಪಿಣರಾಯಿ ವಿಜಯನ್ | Photo: PTI

ತ್ರಿಶೂರು: ಧಾರ್ಮಿಕ ಸಾಮರಸ್ಯ,ಸಹಬಾಳ್ವೆ ಮತ್ತು ಭ್ರಾತೃತ್ವಕ್ಕೆ ಕೇರಳವೇ ಕೊನೆಯ ಆಸರೆಯಾಗಿದೆ ಎಂದು ರವಿವಾರ ಇಲ್ಲಿ ಹೇಳಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ದೇಶದಲ್ಲಿಯ ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧ ಹೋರಾಡುವಂತೆ ಸಾಂಸ್ಕೃತಿಕ ನಾಯಕರನ್ನು ಆಗ್ರಹಿಸಿದರು.

ಸರಕಾರದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ʼನವ ಕೇರಳ ಸದಸ್ʼ ನ ಭಾಗವಾಗಿ ರಾಜ್ಯದ ಸಾಂಸ್ಕೃತಿಕ ಕ್ಷೇತ್ರದ ಜನರೊಂದಿಗೆ ಮುಖಾಮುಖಿ ಸಂವಾದದಲ್ಲಿ ಮಾತನಾಡಿದ ವಿಜಯನ್, ದೇಶದ ಸಾಂಸ್ಕೃತಿಕ ಇತಿಹಾಸವು ಶ್ರೀಮಂತ ಮತ್ತು ವೈವಿಧ್ಯಪೂರ್ಣವಾಗಿದೆ. ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮದಂತಹ ಸಾಂಸ್ಕೃತಿಕ ಏಕರೂಪತೆಯನ್ನು ಹೇರಿದಾಗ ಪ್ರಜಾಪ್ರಭುತ್ವವು ಫ್ಯಾಸಿಸಂ ಆಗಿ ಬದಲಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.

‘ಧಾರ್ಮಿಕ ಸಾಮರಸ್ಯ,ಸಹಬಾಳ್ವೆ ಮತ್ತು ಭ್ರಾತೃತ್ವಕ್ಕೆ ಕೇರಳವೇ ಕೊನೆಯ ಆಸರೆಯಾಗಿದೆ. ಅದನ್ನು ಕಳೆದುಕೊಳ್ಳಬಾರದು. ಕೇರಳದ ಸಹಜ ಸಂಸ್ಕೃತಿಯನ್ನು ಉಳಿಸಿಕೊಂಡು ಭಾರತವೆಂಬ ಭಾವನೆಯನ್ನು ಬಲಗೊಳಿಸಲು ನಮಗೆ ಸಾಧ್ಯವಾಗಬೇಕು ’ ಎಂದರು.

ಕೇರಳದ ಭವಿಷ್ಯ ಕುರಿತು ಚರ್ಚೆಗಳಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಹೇಳಿದ ವಿಜಯನ್,ಸಮಕಾಲೀನ ಭಾರತದಲ್ಲಿ ನೆಲೆಯೂರುತ್ತಿರುವ ವಿಧ್ವಂಸಕ ಕೋಮುವಾದದ ವಿರುದ್ಧ ಹೋರಾಡಲು ಸಾಂಸ್ಕೃತಿಕ ಕ್ಷೇತ್ರದ ಪರಿಣಾಮಕಾರಿ ಮಧ್ಯಪ್ರವೇಶ ಅಗತ್ಯವಾಗಿದೆ ಎಂದರು.

ರಾಜಕೀಯ ಮತ್ತು ಸಾಂಸ್ಕೃತಿಕ ಭ್ರಾತೃತ್ವ ಇಂದಿನ ಕೇರಳವನ್ನು ರೂಪಿಸಿದೆ ಎಂದ ಅವರು,‘ಕಲೆ ಮತ್ತು ಕಲಾವಿದ ಬದುಕಬೇಕಿದ್ದರೆ,ಬರಹಗಳು ಮತ್ತು ಬರಹಗಾರರು ಉಳಿಯಬೇಕಿದ್ದರೆ ನಾವು ಜನರ ನಡುವಿನ ಏಕತೆಯ ಬುನಾದಿಯನ್ನೇ ನಾಶಮಾಡುವ ಶಕ್ತಿಗಳ ವಿರುದ್ಧ ಹೋರಾಡುವ ಅಗತ್ಯವಿದೆ. ಫ್ಯಾಸಿಸಂ ನಮ್ಮ ಮನೆ ಬಾಗಿಲಿಗೆ ಬಂದು ನಿಂತ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು.

ಕೇರಳವು ಎಡಪಂಥೀಯ ಚಿಂತನೆಗಳನ್ನು ಹೊಂದಿದ್ದು,ಇದರಿಂದಾಗಿಯೇ ಇತರ ಹೆಚ್ಚಿನ ರಾಜ್ಯಗಳಿಗಿಂತ ಅಭಿವೃದ್ಧಿ ಮತ್ತು ಜೀವನಮಟ್ಟದಲ್ಲಿ ಮುಂದಿದೆ ಎಂದು ವಿಜಯನ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News