ಯೋಧನನ್ನು ಪಿಎಫ್‌ಐ ಕಾರ್ಯಕರ್ತರು ಅಪಹರಿಸಿ, ಥಳಿಸಿದ್ದಾರೆಂಬ ಪ್ರಕರಣಕ್ಕೆ ತಿರುವು

Update: 2023-09-26 09:15 GMT

Photo credit: madhyamam.com

ತಿರುವನಂತಪುರಂ: ಕೇರಳದ ಕಡಕ್ಕಲ್‌ನಲ್ಲಿ ಭಾರತೀಯ ಯೋಧನ ಮೇಲೆ ಹಲ್ಲೆ ನಡೆಸಿ ಬೆನ್ನ ಮೇಲೆ ಪಿಎಫ್‌ಐ ಎಂದು ಬರೆಯಲಾದ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಸ್ವತಃ ಯೋಧನೇ ಕಟ್ಟಿರುವ ಕಥೆ ಇದು ಎಂದು ತನಿಖೆ ವೇಳೆ ಸಾಬೀತಾಗಿದೆ.

ರಾಜಸ್ಥಾನದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಯೋಧ ಶೈನ್ ಕುಮಾರ್ ತನ್ನನ್ನು ಆರು ಮಂದಿ ಅಪಹರಿಸಿ ಥಳಿಸಿದ್ದಾರೆಂದು ದೂರು ನೀಡಿದ್ದರು. ಯೋಧನ ಸ್ನೇಹಿತ ಜೋಶಿ ಎಂಬಾತನನ್ನು ಕಸ್ಟಡಿಗೆ ಪಡೆದು ವಿಚಾರಿಸಿದಾಗ ಇದೆಲ್ಲಾ ಕಟ್ಟು ಕತೆ ಎನ್ನುವುದು ಬಹಿರಂಗಗೊಂಡಿದೆ ಎಂದು madhyamam.com ವರದಿ ಮಾಡಿದೆ.

ತಾನು ರವಿವಾರ ರಾತ್ರಿ ಸ್ನೇಹಿತನ ಮನೆಗೆ ಹೋಗುವಾಗ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವ್ಯಕ್ತಿಗಳ ಗುಂಪು ತನ್ನನ್ನು ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಆರೋಪಿಸಿದ್ದರು. ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ತನ್ನ ಅಂಗಿಯನ್ನು ಹರಿದು ಹಾಕಿ, ಹಸಿರು ಬಣ್ಣದಲ್ಲಿ ಪಿಎಫ್ಐ ಎಂದು ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಆದರೆ, ತನಿಖೆ ಮುಂದುವರೆದಂತೆ ಇಡೀ ಘಟನೆಗೆ ತಿರುವು ಪಡೆದುಕೊಂಡಿದ್ದು, ಸುಲಭದ ದಾರಿಯಲ್ಲಿ ಜನಪ್ರಿಯಗೊಳ್ಳಲು ಸ್ವತಃ ಯೋಧನೇ ಮಾಡಿರುವ ಕಟ್ಟು ಕತೆ ಎಂದು ಪೊಲೀಸರು ಕಂಡು ಕೊಂಡಿದ್ದಾರೆ. ಯೋಧನ ಬೆನ್ನಿನ ಮೇಲೆ PFI ಎಂದು ಶೈನ್‌ ಕುಮಾರ್‌ನ ಗೆಳೆಯ ಜೋಶಿ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಶೈನ್ ಅವರ ಬೆನ್ನಿನ ಮೇಲೆ "PFI" ಎಂದು ಬರೆಯಲು ಬಳಸಲಾದ ಬಣ್ಣ ಮತ್ತು ಬ್ರಷ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೈನ್ ಗೆ ಖ್ಯಾತಿ ಮತ್ತು ಮನ್ನಣೆ ಪಡೆಯುವ ಆಸೆ ಇತ್ತು, ಇದಕ್ಕಾಗಿ ತನ್ನ ಮೇಲೆ ದಾಳಿ ನಡೆದಿರುವ ಬಗ್ಗೆ ಕಥೆ ಕಟ್ಟಲಾಗಿತ್ತು ಎಂದು ಜೋಶಿ ತಿಳಿಸಿದ್ದಾನೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News