"ಅತ್ಯಾಚಾರ ಆರೋಪಿ ಸಂಜಯ್ ರಾಯ್‌ಗೆ ನಾನು ಜಾಮೀನು ನೀಡಬೇಕೇ?": ಸಿಬಿಐ ವಕೀಲರ ಗೈರುಹಾಜರಿಗೆ ನ್ಯಾಯಮೂರ್ತಿ ಅಸಮಾಧಾನ

Update: 2024-09-07 05:55 GMT

ಕೊಲ್ಕತ್ತಾ ವೈದ್ಯೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ ರಾಯ್

ಕೋಲ್ಕತ್ತಾ: ಆರ್ ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಸಂಜಯ್ ರಾಯ್ ಜಾಮೀನು ಅರ್ಜಿ ವಿಚಾರಣೆಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಅಧಿಕಾರಿ ಮತ್ತು ವಕೀಲರು ಕ್ಲಪ್ತ ಸಮಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆ ನ್ಯಾಯಾಧೀಶರು ಅಸಮಾಧಾನಗೊಂಡಿದ್ದು, ಅತ್ಯಾಚಾರ ಆರೋಪಿ ಸಂಜಯ್ ರಾಯ್‌ಗೆ ನಾನು ಜಾಮೀನು ನೀಡಬೇಕೇ? ಎಂದು ಪ್ರಶ್ನಿಸಿರುವ ಪ್ರಸಂಗ ನಡೆದಿದೆ.

ಪ್ರಕರಣದ ವಿಚಾರಣೆಯ ವೇಳೆ ಸಿಬಿಐ ವಕೀಲ ದೀಪಕ್ ಪೋರಿಯಾ 50 ನಿಮಿಷ ತಡವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಆ ಬಳಿಕ ಸಂಜಯ್ ರಾಯ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ, ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ಕೋರ್ಟ್ ನಲ್ಲಿ ವಾದಿಸಿದ್ದಾರೆ. ವಿಚಾರಣೆಯ ವೇಳೆ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಮೇಲಾ ಗುಪ್ತಾ ತನಿಖಾಧಿಕಾರಿಯ ಗೈರುಹಾಜರಿ ಮತ್ತು ಪ್ರಾಸಿಕ್ಯೂಟರ್ ವಿಳಂಬದ ಬಗ್ಗೆ ಭಾರೀ ಅಸಮಾಧಾನಗೊಂಡಿದ್ದು, ನಾನು ಸಂಜಯ್ ರಾಯ್‌ಗೆ ಜಾಮೀನು ನೀಡಬೇಕೇ? ಸಿಬಿಐನ ಆಲಸ್ಯವನ್ನು ಇದು ತೋರಿಸುತ್ತದೆ. ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.

ಸಂಜಯ್ ರಾಯ್ ಅವರ ಜಾಮೀನು ಅರ್ಜಿಯ ವಿಚಾರಣೆ ಸೀಲ್ದಾ ನ್ಯಾಯಾಲಯದಲ್ಲಿ ನಡೆಯುತ್ತಿತ್ತು, ಆದರೆ ಸಿಬಿಐ ಪರ ವಕೀಲರ ಉಪಸ್ಥಿತರಿರಲಿಲ್ಲ. ಸಿಬಿಐ ಪರ ಹಾಜರಾಗಿದ್ದ ಅಧಿಕಾರಿಯೊಬ್ಬರು ಸಂಜೆ 4:10ಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಬರುತ್ತಿದ್ದಾರೆ ಎಂದು ಪಮೇಲಾ ಗುಪ್ತಾ ಅವರ ಪೀಠಕ್ಕೆ ತಿಳಿಸಿದ್ದಾರೆ. ಆ ಬಳಿಕವೂ ವಕೀಲರು ಬರದ ಹಿನ್ನಲೆ ಈಗ 4:20 ಆಗಿದೆ. ಇದು ತುಂಬಾ ದುರದೃಷ್ಟಕರ, ವಕೀಲರಿಗೆ ಕರೆ ಮಾಡಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ತನಿಖಾಧಿಕಾರಿ ಈ ವೇಳೆ ವಕೀಲರಿಗೆ ಕರೆ ಮಾಡಲೆಂದು ಕೋರ್ಟ್ನಿಂದ ಹೊರ ಬಂದಿದ್ದು, 15 ನಿಮಿಷ ಕಳೆದು ಮತ್ತೆ ಕೋರ್ಟ್ ಕಲಾಪಕ್ಕೆ ಬಂದಿರುವುದನ್ನು ಕೋರ್ಟ್ ಗಮನಿಸಿದೆ. ಅಂತಿಮವಾಗಿ ಸಂಜೆ 5 ಗಂಟೆಗೆ ಸಿಬಿಐ ವಕೀಲ ದೀಪಕ್ ಪೋರಿಯಾ ಕೋರ್ಟ್ ಕಲಾಪಕ್ಕೆ ಆಗಮಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿ ಸಂಜಯ್ ರಾಯ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಿಬಿಐ ವಿರುದ್ಧ ತೃಣಮೂಲ ಕಾಂಗ್ರೆಸ್ ವಾಗ್ದಾಳಿ

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, ಸಿಬಿಐ ಸಂಜಯ್ ರಾಯ್ ಅವರಿಗೆ ಜಾಮೀನು ಸಿಗುವುದನ್ನು ಬಯಸಿತ್ತು. ಸಿಬಿಐ, ಬಿಜೆಪಿ ಮತ್ತು ಮೋದಿ ಸರ್ಕಾರವು ರಾಜಕೀಯ ಅಜೆಂಡಾವನ್ನು ಸಾಧಿಸಲು ಮತ್ತು ಈ ಪ್ರಕರಣವನ್ನು ಸಮಾಧಿ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News