ಕುನೊ ರಾಷ್ಟ್ರೀಯ ಉದ್ಯಾನವನ | ಐದು ಮರಿಗಳಿಗೆ ಜನ್ಮ ನೀಡಿದ ದಕ್ಷಿಣ ಆಫ್ರಿಕಾದ ಚೀತಾ

Update: 2024-03-10 17:24 GMT

Photo : X/@byadavbjp

ಕುನೊ (ಮಧ್ಯಪ್ರದೇಶ): ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆ ತಂದಿರುವ ಗಾಮಿನಿ ಚೀತಾವು ಐದು ಮರಿ ಚೀತಾಗಳಿಗೆ ಜನ್ಮ ನೀಡಿದೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಚೀತಾ ಯೋಜನೆಯನ್ವಯ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸೆಪ್ಟೆಂಬರ್ 2022ರಲ್ಲಿ 20 ಚೀತಾಗಳನ್ನು ಕರೆ ತರಲಾಗಿತ್ತು. ಈ ಪೈಕಿ ಮಾರ್ಚ್ 2023ರಿಂದ ಏಳು ಚೀತಾಗಳು ಮೃತಪಟ್ಟಿವೆ. ಆದರೆ, ಈ ವರ್ಷದ ಜನವರಿಯಿಂದೀಚೆಗೆ 13 ಮರಿ ಚೀತಾಗಳು ಜನಿಸಿರುವುದರಿಂದ ಅಧಿಕಾರಿಗಳು ಉತ್ತೇಜಿತರಾಗಿದ್ದಾರೆ. ಸದ್ಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 26 ಚೀತಾಗಳಿವೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್, ಮರಿ ಚಿರತೆಗಳ ಜನನದ ಕುರಿತು ಪ್ರಕಟಿಸಿದ್ದಾರೆ. “ಭಾರತದ ನೆಲದ ಮೇಲೆ ಜನ್ಮ ನೀಡಿರುವ ನಾಲ್ಕನೆಯ ಚೀತಾ ಇದಾಗಿದ್ದು, ದಕ್ಷಿಣ ಆಫ್ರಿಕಾದಿಂದ ಕರೆ ತರಲಾದ ಚೀತಾ ಪೈಕಿ ಇದು ಮೊದಲನೆಯದಾಗಿದೆ. ಎಲ್ಲರಿಗೂ ಅಭಿನಂದನೆಗಳು, ವಿಶೇಷವಾಗಿ ಚೀತಾಗಳಿಗೆ ಒತ್ತಡ ರಹಿತ ಪರಿಸರವನ್ನು ಖಾತರಿಪಡಿಸಿದ ಅರಣ್ಯಾಧಿಕಾರಿಗಳ ತಂಡ, ಪಶು ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳಿಗೆ. ಇದರಿಂದಾಗಿ, ಯಶಸ್ವಿ ಮಿಲನ ಸಾಧ್ಯವಾಗಿ, ಮರಿ ಚೀತಾಗಳು ಜನಿಸಲು ಸಾಧ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.

ತಾಯಿ ಚೀತಾಗಳು ಹಾಗೂ ಮರಿ ಚೀತಾಗಳನ್ನು ದೊಡ್ಡ ಪಂಜರದಲ್ಲಿರಿಸುವ ಮೂಲಕ ಇತರ ಭಕ್ಷಕ ಪ್ರಾಣಿ ಮುಕ್ತ ವಾತಾವರಣ ನಿರ್ಮಿಸಿ, ಅವುಗಳ ಸಂತಾನ ವೃದ್ಧಿಯಾಗುವುದನ್ನು ಖಾತರಿಪಡಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News