ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆ ಕುರಿತು ಕಾನೂನು ಆಯೋಗಕ್ಕೆ ಇಲ್ಲಿಯ ತನಕ ಬಂದದ್ದು ಎಷ್ಟು ಲಕ್ಷ ಪ್ರತಿಕ್ರಿಯೆಗಳು ಗೊತ್ತೇ?
ಹೊಸದಿಲ್ಲಿ: ಸಮಾನ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಕಾನೂನು ಆಯೋಗಕ್ಕೆ ಜುಲೈ 10ರ ತನಕ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಬಂದಿವೆ. ಅಭಿಪ್ರಾಯ ಸಂಗ್ರಹಿಸಲು ಜುಲೈ 14ರ ತನಕ ಆಯೋಗ ಅವಕಾಶ ನೀಡಿದೆ.
ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಲು ಕಾನೂನು ಆಯೋಗ ಮುಂದಿನ ದಿನಗಳಲ್ಲಿ ಕೆಲ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಆಹ್ವಾನಿಸಲಿದೆಯೆಂಬ ಮಾಹಿತಿಯಿದ್ದು ಈ ಕುರಿತಾದ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು thewire.ಇನ್ ವರದಿ ಮಾಡಿದೆ.
ಜೂನ್ 14ರಂದು 22ನೇ ಕಾನೂನು ಆಯೋಗವು ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆ ಕುರಿತಂತೆ ಸಾರ್ವಜನಿಕರ ಅಭಿಪ್ರಾಯ ಕೋರಿ ಅಧಿಸೂಚನೆ ಹೊರಡಿಸಿ ಅಭಿಪ್ರಾಯ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು.
ಸಮಾನ ನಾಗರಿಕ ಸಂಹಿತೆಯ ಅಗತ್ಯವೂ ಇಲ್ಲ ಹಾಗೂ ಈ ಹಂತದಲ್ಲಿ ಅದು ಅಪೇಕ್ಷಾರ್ಹವೂ ಅಲ್ಲ ಎಂದು 21ನೇ ಕಾನೂನು ಆಯೋಗ ಆಗಸ್ಟ್ 2018ರಲ್ಲಿಯೇ ತಿಳಿಸಿದ್ದರೂ 22ನೇ ಕಾನೂನು ಆಯೋಗ ಈ ಕುರಿತಂತೆ ಹೊಸ ಅಧಿಸೂಚನೆ ಹೊರಡಿಸಿತ್ತು.
ಆಯೋಗದ ಸದಸ್ಯರು ಈ ತಿಂಗಳು ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗುವ ವೇಳೆ ಈ ಅಧಿಸೂಚನೆಯನ್ನು ಸಮರ್ಥಿಸಿಕೊಂಡಿದ್ದರು.