ಹರ್ಯಾಣ | ಕಾರಿನಲ್ಲಿ ನಿದ್ರಿಸುತ್ತಿದ್ದ ಉದ್ಯಮಿಯನ್ನು ಹೊರಗೆಳೆದು ಭೀಕರ ಹತ್ಯೆ
ಚಂಡಿಗಡ : ಹೆದ್ದಾರಿ ಬದಿಯ ಧಾಬಾವೊಂದರ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಎಸ್‌ಯುವಿ ವಾಹನದಲ್ಲಿ ನಿದ್ರಿಸುತ್ತಿದ್ದ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಹೊರಗೆಳೆದು ಗುಂಡಿನ ಮಳೆ ಸುರಿಸಿ ಹತ್ಯೆಗೈದಿರುವ ಘಟನೆ ಹರ್ಯಾಣದ ಸೋನೆಪತ್ ಜಿಲ್ಲೆಯ ಮುರ್ಥಲ್ ಎಂಬಲ್ಲಿ ರವಿವಾರ ನಡೆದಿದೆ.
ಮುರ್ಥಲ್‌ನ ಗುಲ್ಶನ್ ಧಾಬಾದ ಬಳಿ ಬೆಳಿಗ್ಗೆ 8:30ರ ಸುಮಾರಿಗೆ ಈ ಹತ್ಯೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಗೊಹಾನಾದ ಸರಗ್ತಲ್ ಗ್ರಾಮದ ನಿವಾಸಿ,ಮದ್ಯ ವ್ಯಾಪಾರಿ ಸುಂದರ್ ಮಲಿಕ್ (38) ಎಂದು ಗುರುತಿಸಲಾಗಿದೆ. ಹತ್ಯೆಯ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಲಿಕ್‌ನನ್ನು ಇಬ್ಬರು ದಾಳಿಕೋರರು ವಾಹನದಿಂದ ಹೊರಗೆಳೆದು ಆತನ ಮೇಲೆ ಗುಂಡು ಹಾರಿಸಿದ್ದರು. ಗಾಯಗೊಂಡಿದ್ದರೂ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಆತ ಓರ್ವ ದಾಳಿಕೋರನನ್ನು ಹಿಡಿದು ನೆಲಕ್ಕೆ ಕೆಡವಿದ್ದನಾದರೂ ಇನ್ನೋರ್ವ ದಾಳಿಕೋರ ಗುಂಡುಗಳನ್ನು ಹಾರಿಸುತ್ತಿದ್ದನ್ನು ವೀಡಿಯೊ ತೋರಿಸಿದೆ.
ಮಲಿಕ್ ಹಿಡಿದಿದ್ದ ದಾಳಿಕೋರ ಆತನ ಹಿಡಿತದಿಂದ ತಪ್ಪಿಸಿಕೊಂಡಿದ್ದರೆ ಇನ್ನೋರ್ವ ದಾಳಿಕೋರ ಆತ ಸಾಯುವವರೆಗೆ ಗುಂಡಿನ ದಾಳಿ ನಡೆಸಿದ್ದ. ಧಾಬಾ ಮಾಲಿಕನ ಕರೆಯ ಮೇರೆಗೆ ಪೋಲಿಸರು ಸ್ಥಳಕ್ಕೆ ಧಾವಿಸಿದ್ದು, ಅದಾಗಲೇ ದಾಳಿಕೋರರು ಪರಾರಿಯಾಗಿದ್ದರು.
ಸುಮಾರು 35 ಸುತ್ತು ಗುಂಡುಗಳನ್ನು ಹಾರಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ಕೊಲೆ,ಕೊಲೆಯತ್ನ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ ಮಲಿಕ್ ಇತ್ತೀಚಿಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಎಂದು ತಿಳಿಸಿದ ಡಿಸಿಪಿ ಗೌರವ ರಾಜಪುರೋಹಿತ, ಗ್ಯಾಂಗ್‌ವಾರ್ ಈ ಹತ್ಯೆಗೆ ಕಾರಣ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಹೇಳಿದರು.
ಆದಾಗ್ಯೂ,ವಿದೇಶದಲ್ಲಿದ್ದಾನೆ ಎಂದು ನಂಬಲಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಹಿಮಾಂಶು ಅಲಿಯಾಸ್ ಭಾವು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಇಂಟರ್‌ಪೋಲ್ ಕಳೆದ ವರ್ಷ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸನ್ನು ಹೊರಡಿಸಿತ್ತು.