ಲೋಕಸಭೆ ಚುನಾವಣೆ | ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಿಂದ ಸ್ಪರ್ಧೆ
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಉಮರ್ ಅಬ್ದುಲ್ಲಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ವರಿಷ್ಠ ಫಾರೂಕ್ ಅಬ್ದುಲ್ಲಾ ಶುಕ್ರವಾರ ಪ್ರಕಟಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಅಗಾ ಸೈಯದ್ ರುಹುಲ್ಲಾಹ್ ಮೆಹ್ದಿ ಅವರು ಶ್ರೀನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕೂಡ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆಯ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ತನ್ನ ಪಕ್ಷದ ಸ್ಪರ್ಧೆ ವ್ಯಕ್ತಿಯೋರ್ವನ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.
‘‘ಬಿಜೆಪಿ ಉತ್ತರ ಕಾಶ್ಮೀರದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತಿದೆ. ಆದುದರಿಂದ ನಾನು ಉತ್ತರ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಉತ್ತರ ಕಾಶ್ಮೀರದಲ್ಲಿ ನನ್ನ ಸ್ಪರ್ಧೆ ಯಾವುದೇ ಅಭ್ಯರ್ಥಿಯ ವಿರುದ್ಧ ಅಲ್ಲ. ಅಭ್ಯರ್ಥಿಯ ಹಿಂದಿರುವ ಶಕ್ತಿಯ ವಿರುದ್ಧ’’ ಎಂದು ಅವರು ಹೇಳಿದ್ದಾರೆ.
ಉತ್ತರ ಕಾಶ್ಮೀರದಲ್ಲಿ ಈ ಶಕ್ತಿಗಳನ್ನು ಸೋಲಿಸಲು ನಾನು ಬಯಸುತ್ತೇನೆ ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜಮ್ಮು ಹಾಗೂ ಕಾಶ್ಮೀರ, ಲಡಾಖ್ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ.