ಉತ್ತರ ಪ್ರದೇಶ: ಗುಂಪಿನಿಂದ ಹತ್ಯೆಯಾದ ವ್ಯಕ್ತಿಯ ವಿರುದ್ಧ 10 ದಿನಗಳ ಬಳಿಕ ದರೋಡೆ ಆರೋಪದಲ್ಲಿ ಎಫ್‌ಐಆರ್ ದಾಖಲು
ಆಗ್ರಾ: ಗುಂಪೊಂದು ಮುಹಮ್ಮದ್ ಫರೀದ್(35) ಎಂಬಾತನನ್ನು ಥಳಿಸಿ ಹತ್ಯೆಗೈದ 10 ದಿನಗಳ ಬಳಿಕ ಶನಿವಾರ ಆತ, ಆತನ ಸೋದರ ಮತ್ತು ಇತರ ಐವರ ವಿರುದ್ಧ ಅಲಿಗಡದಲ್ಲಿ ಎಫ್‌ಐಆರ್ ದಾಖಲಾಗಿದೆ.
ಐಪಿಸಿಯ ಕಲಂ 395 (ದರೋಡೆ) ಮತ್ತು ಕಲಂ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ)ರ ಅಡಿ ಎಫ್‌ಐಆರ್‌ನ್ನು ದಾಖಲಿಸಲಾಗಿದೆ.
ಫರೀದ್, ಆತನ ಸೋದರ ಝಕಿ ಮತ್ತು ಅವರ ಸಹಚರರು ತನ್ನ ಮನೆಯಲ್ಲಿ ದರೋಡೆ ನಡೆಸಿದ್ದಾರೆ. ಫರೀದ್ ತನಗೆ ಪಿಸ್ತೂಲು ತೋರಿಸಿ ಬೆದರಿಸಿದ್ದ, ತನ್ನ ಚಿನ್ನದ ಸರವನ್ನು ಕಿತ್ತುಕೊಂಡಿದ್ದ ಮತ್ತು ತನ್ನ ಬಳಿಯಿಂದ 2.5 ಲಕ್ಷ ರೂ. ನಗದು ಮತ್ತು ಇತರ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದ ಎಂದು ಜವಳಿ ವ್ಯಾಪಾರಿ ಮುಕೇಶಚಂದ ಮಿತ್ತಲ್ ಅವರ ಪತ್ನಿ ತನ್ನ ದೂರಿನಲ್ಲಿ ಆಪಾದಿಸಿದ್ದಾರೆ.
ದೂರಿನ ಆಧಾರದಲ್ಲಿ ಹತ್ಯೆಯಾಗಿರುವ ಫರೀದ್ ಸೇರಿದಂತೆ ಏಳು ಜನರು ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಎಸ್‌ಪಿ ರಾಕೇಶ್ ಸಿಸೋದಿಯಾ ತಿಳಿಸಿದರು.
ಜೂ.18ರಂದು ಗುಂಪೊಂದು ಕಳ್ಳತನದ ಶಂಕೆಯಿಂದ ಫರೀದ್‌ನನ್ನು ಥಳಿಸಿ ಕೊಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವೀಡಿಯೊ ಗುಂಪು ಫರೀದ್ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ತೋರಿಸಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮರುದಿನ ಪೋಲಿಸರು ಹತ್ಯೆಗೆ ಸಂಬಂಧಿಸಿದಂತೆ ಹೆಸರಿಸಲಾದ 10 ಜನರು ಮತ್ತು ಒಂದು ಡಜನ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಆರು ಜನರನ್ನು ಬಂಧಿಸಿದ್ದರು.
ಫರೀದ್ ಮಿತ್ತಲ್ ಅವರ ಮನೆಯಿಂದ ಹೊರಬಂದು ಗೇಟ್‌ನತ್ತ ಓಡುತ್ತಿದ್ದನ್ನು ನೋಡಿದ ಜನರು ಆತನ ಮೇಲೆ ದಾಳಿ ನಡೆಸಿದ್ದರು ಎಂದು ಘಟನೆಯ ಬಳಿಕ ಪೋಲಿಸರು ಹೇಳಿದ್ದರು.
ಫರೀದ್‌ನ ಧರ್ಮದ ಬಗ್ಗೆ ಗೊತ್ತಾದ ನಂತರವೇ ಗುಂಪು ಆತನ ಮೇಲೆ ದಾಳಿ ನಡೆಸಿತ್ತು ಎಂದು ಝಕಿ ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾನೆ.
ರಾಜಕಾರಣಿಗಳು ಮತ್ತು ಬಲಪಂಥೀಯ ಕಾರ್ಯಕರ್ತರ ಒತ್ತಡದಿಂದಾಗಿ ಫರೀದ್‌ನ ಕೊಲೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮೃತಪಟ್ಟಿರುವ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಝಕಿ ಸುದ್ದಿಸಂಸ್ಥೆಗೆ ತಿಳಿಸಿದ.